Greater Bengaluru News9 : ಬೆಸ್ಕಾಂ ವ್ಯಾಪ್ತಿಯ ಹೈಟೆನ್ಷನ್ (ಎಚ್‌ಟಿ) ವಿದ್ಯುತ್ ಸಂಪರ್ಕದ ಗ್ರಾಹಕರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ ಹಾಗೂ ಕುಂದು ಕೊರತೆ ಪರಿಹಾರದ ‘ಎಚ್‌ಟಿ ಮಿತ್ರ’ ಪೋರ್ಟಲ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ನಗರದಲ್ಲಿ ಗುರುವಾರ ಚಾಲನೆ ನೀಡಿದರು. ಇದರಿಂದ 18 ಸಾವಿರ ಗ್ರಾಹಕರಿಗೆ ಅನುಕೂಲ ಆಗಲಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಜಾರ್ಜ್, ”ಎಚ್‌ಟಿ ಸಂಪರ್ಕದ ಗ್ರಾಹಕರು ವಿದ್ಯುತ್ ಸಂಬಂಧಿತ ಸೇವೆಗಳ ಕೋರಿಕೆಗೆ ಹಾಗೂ ದೂರುಗಳನ್ನು ದಾಖಲಿಸಿ ಪರಿಹಾರ ಕಂಡುಕೊಳ್ಳಲು ಈ ಪೋರ್ಟಲ್ ಪಾರದರ್ಶಕ ಮತ್ತು ಪರಿಣಾಮಕಾರಿ ವೇದಿಕೆಯಾಗಲಿದೆ. ಬೆಸ್ಕಾಂ ವ್ಯಾಪ್ತಿಯ ಎಚ್‌ಟಿ ಸಂಪರ್ಕದ ಗ್ರಾಹಕರಿಗೆ ಪೋರ್ಟಲ್ ಸೌಲಭ್ಯ ಲಭ್ಯವಿದ್ದು, ಇದರಿಂದ 18 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲವಾಗಲಿದೆ,” ಎಂದರು.
ಈ ಮೊದಲು ಎಚ್‌ಟಿ ಗ್ರಾಹಕರು ದೂರು ದಾಖಲಿಸಲು 1912 ಸಹಾಯವಾಣಿ ಅವಲಂಬಿಸಬೇಕಿತ್ತು ಅಥವಾ ಖುದ್ದು ಬೆಸ್ಕಾಂ ಕಚೇರಿಗೆ ಹೋಗಬೇಕಿತ್ತು. ಗ್ರಾಹಕರಿಗೆ ತಮ್ಮ ದೂರಿನ ನೈಜ ಸಮಯದ ಟ್ರ್ಯಾಕಿಂಗ್ ಸಾಧ್ಯವಾಗುತ್ತಿರಲಿಲ್ಲ. ಎಚ್‌ಟಿ ಮಿತ್ರ ಪೋರ್ಟಲ್ ಈ ಎಲ್ಲಾಕೊರತೆಗಳನ್ನು ನೀಗಿಸಲಿದ್ದು, ದೂರು ಪ್ರಕ್ರಿಯೆಯನ್ನು ಡಿಜಿಟಲ್ ವೇದಿಕೆಯಡಿ ಸಂಯೋಜಿಸುತ್ತದೆ. ಗ್ರಾಹಕರು ಪೋರ್ಟಲ್‌ನಲ್ಲಿಲಾಗಿನ್ ಆಗಿ, ದೂರು ದಾಖಲಿಸಿದ ಕೂಡಲೇ ನೈಜ ಸಮಯದಲ್ಲಿಅದರ ಸ್ಥಿತಿಗತಿ ಪರಿಶೀಲಿಸಬಹುದು. ಈ ಅಪ್ಲಿಕೇಶನ್‌ನಿಂದಲೇ ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ,” ಎಂದು ವಿವರಿಸಿದರು.
ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವುದು ಸರಕಾರದ ಆದ್ಯತೆ. ಸಮಸ್ಯೆಗಳು ಕಂಡುಬಂದಾಗ ತ್ವರಿತವಾಗಿ ಸ್ಪಂದಿಸಿ, ದೂರು ಪರಿಹರಿಸಲು ತಂತ್ರಜ್ಞಾನ ಬಳಸಲಾಗುತ್ತಿದ್ದು, ಬೆಸ್ಕಾಂ ಎಂಜಿನಿಯರ್‌ಗಳೇ ಈ ಪೋರ್ಟಲ್ ರೂಪಿಸಿರುವುದು ಶ್ಲಾಘನೀಯ. ಇಂತಹ ಗ್ರಾಹಕಸ್ನೇಹಿ ನೀತಿ ಹಾಗೂ ಕ್ರಮಗಳಿಗೆ ಸರಕಾರದ ಬೆಂಬಲ ಸದಾ ಇರುತ್ತದೆ,” ಎಂದು ಹೇಳಿದರು.
”ಎಚ್‌ಟಿ ಮಿತ್ರ ಪೋರ್ಟಲ್‌ನಲ್ಲಿದೂರೂ ದಾಖಲಾದ ಕೂಡಲೇ ಯಾರು, ಯಾವ ಕ್ರಮ ವಹಿಸಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ನೇರವಾಗಿ ಲಭ್ಯವಾಗಲಿದೆ. ಇದು ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಆಗಿರುವುದರಿಂದ ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಹಾಗೂ ಜವಾಬ್ದಾರಿಯುತ ಪರಿಹಾರ ದೊರೆಯಲಿದೆ,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.ಶಿವಶಂಕರ್ ಅಭಿಪ್ರಾಯಪಟ್ಟರು.
ಪೋರ್ಟಲ್ ವೈಶಿಷ್ಟ್ಯಗಳೇನು?
ಎಚ್‌ಟಿ ವಿದ್ಯುತ್ ಸಂಪರ್ಕದ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸಮಗ್ರ ಡಿಜಿಟಲ್ ವೇದಿಕೆಯಲ್ಲಿಫೋನ್ ನಂಬರ್ ದಾಖಲಿಸುವ ಮೂಲಕ ಸುಲಭ ನೋಂದಣಿ ಮತ್ತು ಲಾಗಿನ್ ಸಾಧ್ಯ. ಟಿಕೆಟಿಂಗ್ ವ್ಯವಸ್ಥೆಯಿರುವ ತ್ವರಿತ ದೂರು ದಾಖಲು ಮತ್ತು ನೈಜ ಸಮಯದ ಟ್ರ್ಯಾಕಿಂಗ್ ಅನ್ನು ಈ ವೇದಿಕೆ ಸಕ್ರಿಯಗೊಳಿಸುತ್ತದೆ. ಈ ಪೋರ್ಟಲ್ ಗ್ರಾಹಕರು ಮತ್ತು ಬೆಸ್ಕಾಂ ಅಧಿಕಾರಿಗಳ ನಡುವೆ ನೇರ ಸಂವಹನವನ್ನು ಸಾಧ್ಯವಾಗಿಸುತ್ತದೆ. ದೂರು ನಿರ್ವಹಣೆಯ ಪ್ರತಿ ಹಂತದಲ್ಲೂಗ್ರಾಹಕರಿಗೆ ಸ್ವಯಂಚಾಲಿತ ಸಂದೇಶಗಳನ್ನೂ ರವಾನಿಸುತ್ತದೆ.
ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕ್ಷೇತ್ರ ಅಧಿಕಾರಿಗಳಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ ಒದಗಿಸುವುದರ ಜತೆಗೆ ಟ್ರ್ಯಾಕಿಂಗ್ ಹಾಗೂ ವರದಿ ವೀಕ್ಷಣೆಗೆ ಅವಕಾಶ ಒದಗಿಸುತ್ತದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಂದ ಪೋರ್ಟಲ್‌ನ ಕೇಂದ್ರೀಕೃತ ಡ್ಯಾಶ್‌ಬೋರ್ಡ್ ಮೇಲ್ವಿಚಾರಣೆ ಆಗಲಿದೆ. ಜತೆಗೆ, ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನ ಪಾಲನೆ ಮಾಡುವುದರಿಂದ ವಿಳಂಬವಾದಾಗ ಎಚ್ಚರಿಕೆ ಸಂದೇಶ ರವಾನೆಯಾಗಿ, ಹೊಣೆಗಾರಿಕೆಯನ್ನು ಖಾತ್ರಿಪಡಿಸುತ್ತದೆ.


