Greater Bengaluru News9 : ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಗುವ ಸಮಯ ಹತ್ತಿರ ಬಂದಿದೆ. ಮೂಲಗಳ ಮಾಹಿತಿಯ ಪ್ರಕಾರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಾಳೆ (ಏಪ್ರಿಲ್ 7, 2026) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ.
ಫಲಿತಾಂಶ ಪ್ರಕಟಿಸಲು ಮಂಡಳಿಯು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇಂದು ಸಂಜೆ ವೇಳೆಗೆ ಸರ್ಕಾರದ ಅಧಿಕೃತ ಅನುಮತಿ ದೊರೆಯುವ ನಿರೀಕ್ಷೆಯಿದೆ. ಒಂದು ವೇಳೆ ಇಂದು ಸಂಜೆ ಅನುಮತಿ ಸಿಕ್ಕರೆ ನಾಳೆಯೇ ಫಲಿತಾಂಶ ಹೊರಬೀಳಲಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಅನುಮತಿ ವಿಳಂಬವಾದರೆ ನಾಡಿದ್ದು (ಏಪ್ರಿಲ್ 8) ಫಲಿತಾಂಶ ಪ್ರಕಟವಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಪರೀಕ್ಷೆಯ ಅಂಕಿ-ಅಂಶಗಳು
- ಪರೀಕ್ಷೆ ನಡೆದ ದಿನಾಂಕ: ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ
- ಒಟ್ಟು ವಿದ್ಯಾರ್ಥಿಗಳು: 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು
- ಪರೀಕ್ಷಾ ಕೇಂದ್ರಗಳು: ರಾಜ್ಯಾದ್ಯಂತ ಒಟ್ಟು 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು
ಫಲಿತಾಂಶ ನೋಡೋದು ಹೇಗೆ?
ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗಳಾದ karresults.nic.in ಅಥವಾ kseab.karnataka.gov.in ಮೂಲಕ ತಮ್ಮ ನೋಂದಣಿ ಸಂಖ್ಯೆಯನ್ನು (Register Number) ನಮೂದಿಸಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆದಿದ್ದು, ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡಲು ಮಂಡಳಿ ಮುಂದಾಗಿರುವುದು ವಿಶೇಷವಾಗಿದೆ.


