BBMP
Loading ...

Towing

Greater Bengaluru News9 : ನಗರದ ರಸ್ತೆ ಬದಿಗಳಲ್ಲಿ ಹಲವಾರು ತಿಂಗಳುಗಳಿಂದ ನಿಲ್ಲಿಸಲಾಗಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ಏಪ್ರಿಲ್ 7 ರಿಂದ ಟೋಯಿಂಗ್ ಕಾರ್ಯಾಚರಣೆಯನ್ನು ಆರಂಭಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳೊಂದಿಗಿನ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹೇಶ್ವರ ರಾವ್ ಅವರು, “ಹಲವಾರು ತಿಂಗಳುಗಳಿಂದ ನಗರದ ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ಟೋಯಿಂಗ್ ಕಾರ್ಯಾಚರಣೆಯನ್ನು ತಕ್ಷಣ ಪ್ರಾರಂಭಿಸಬೇಕು ಎಂದರು.

ಈಗಾಗಲೇ ಸಂಚಾರ ಪೊಲೀಸರಿಗೆ ಟೋವಿಂಗ್ ವಾಹನಗಳನ್ನು ಹಸ್ತಾಂತರಿಸಾಗಿದೆ ಮತ್ತು ಅಂತಹ ವಾಹನಗಳ ಪಟ್ಟಿಯನ್ನು ಸಹ ಒದಗಿಸಲಾಗಿದೆ. ಅದರಂತೆ, ನಾಳೆಯಿಂದ ಟೋವಿಂಗ್ ಕಾರ್ಯಾಚರಣೆ ಪ್ರಾರಂಭವಾಗಬೇಕು ಎಂದು ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೊತ್ತುಪಡಿಸಿದ ಪಾರ್ಕಿಂಗ್ ಜಾಗಗಳನ್ನು ಹೊರತುಪಡಿಸಿ, ವೈಟ್-ಟಾಪ್ ಅಥವಾ ಕಾಂಕ್ರೀಟ್ ರಸ್ತೆಗಳು ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಅನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ರಸ್ತೆ ಗುಂಡಿ ಮುಚ್ಚುವ ಯಂತ್ರ ಖರೀದಿಸುವಂತೆ ಸೂಚನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರತಿ ನಗರ ನಿಗಮಕ್ಕೆ ಒಂದು ಗುಂಡಿ ತುಂಬುವ ಯಂತ್ರವನ್ನು ಖರೀದಿಸುವಂತೆ ಜಿಬಿಎ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ವಿವಿಧ ಇಲಾಖೆಗಳು ರಸ್ತೆಗಳನ್ನು ಕತ್ತರಿಸಿ ಪುನಶ್ಚೇತನ ಮಾಡದಿರುವ ಕಡೆಗಳಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವ ಸಲುವಾಗಿ ಐದು ನಗರ ಪಾಲಿಕೆಗಳಲ್ಲಿ ಒಂದೊಂದು ರಸ್ತೆ ಗುಂಡಿ ಮುಚ್ಚುವ ಯಂತ್ರ ಖರೀದಿಸಿ ಡಾಂಬರೀಕರಣ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.

ನಗರದಲ್ಲಿ ವಿವಿಧ ಕಾಮಗಾರಿಗಳಿಗಾಗಿ ರಸ್ತೆ ಕತ್ತರಿಸಲು ಮಾಕ್ರ್ಸ್ ತಂತ್ರಾಂಶದ ಮೂಲಕ ಅನುಮತಿ ಪಡೆದು, ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಪಾಲಿಕೆಯಿಂದಲೇ ದುರಸ್ತಿ ಕಾರ್ಯ ಕೈಗೊಂಡು, ಅದರ ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಗಳಿಂದ ವಸೂಲಿ ಮಾಡಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.

ಇದಲ್ಲದೆ, ‘MARCS’ ಸಾಫ್ಟ್‌ವೇರ್ ವ್ಯವಸ್ಥೆಯ ಮೂಲಕ ರಸ್ತೆ ಕತ್ತರಿಸಲು ಅನುಮತಿ ಪಡೆಯಬೇಕು ಎಂದು ಅವರು ಸೂಚನೆ ನೀಡಿದರು. ‘MARCS’ ಸಾಫ್ಟ್‌ವೇರ್ ಮೂಲಕ ರಸ್ತೆ ಕತ್ತರಿಸಲು GAIL ಗ್ಯಾಸ್ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ಅನುಮೋದಿಸಬೇಕು ಎಂದು ರಾವ್ ಹೇಳಿದರು.

Leave a Reply

Your email address will not be published. Required fields are marked *