Greater Bangalore news9 : ತಾಲೂಕಿನ ರಾಮಾಪುರ ಗ್ರಾಮದ ಬಳಿ ಮಂಗಳವಾರ (ಮಾ.24) ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ತಮ್ಮ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಾಮಾಪುರ ಗ್ರಾಮದ ಸಮೀಪದ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿಗೆ ಆಹುತಿಯಾದ ಕಾರು ಪತ್ತೆಯಾಗಿದೆ. 2.30ರ ಸುಮಾರಿಗೆ ಕಾರು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳಿಯರು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಮೃತ ವ್ಯಕ್ತಿಯನ್ನು ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ನಿವಾಸಿ ರಾಜು ಬೋಳಶೆಟ್ಟಿ ಎಂದು ಗುರುತಿಸಲಾಗಿದ್ದು, ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ಎನ್ನಲಾಗಿದೆ.
ರಾಜು ಅವರ ದೇಹ ಗುರುತಿಸಲಾಗದಷ್ಟು ಸುಟ್ಟು ಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


