Greater Bengaluru News9 : ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಒಂಟಿ ಮನೆ ಯೋಜನೆ ವಿಚಾರದಲ್ಲಿ ಗುಡ್‌ನ್ಯೂಸ್ ಕೊಟ್ಟಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಒಂಟಿ ಮನೆ ಯೋಜನೆ ಬೆಂಗಳೂರಿನಲ್ಲಿ ಸ್ವಂತ ನಿವೇಶನ ಇಲ್ಲದ, ಆರ್ಥಿಕವಾಗಿ ಹಿಂದುಳಿದ ವರ್ಗಗಳು (SC/ST/OBC/ಅಲ್ಪಸಂಖ್ಯಾತರು) ಮತ್ತು ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಪ್ರಾಧಿಕಾರದಿಂದ 4.5 ಲಕ್ಷ ರೂಪಾಯಿಯ ವರೆಗೆ ಆರ್ಥಿಕ ನೆರವು ಅಥವಾ ಸಹಾಯಧನ ನೀಡುವ ಜನಪರ ವಸತಿ ಯೋಜನೆಯಾಗಿದೆ.
ಬಡವರಿಗೆ ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ನೆರವಾಗುವುದು, ಪ್ರತಿ ಫಲಾನುಭವಿಗೆ ಅಂದಾಜು 4.5 ಲಕ್ಷದವರೆಗೆ ಸಹಾಯಧನ (ಅನುದಾನ) ಲಭ್ಯ ಇದರಲ್ಲಿ ಸಿಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು, ಸ್ವಂತ ನಿವೇಶನ (ಜಾಗ) ಹೊಂದಿರಬೇಕು ಮತ್ತು ಹಿಂದುಳಿದ/ಬಡ ವರ್ಗಕ್ಕೆ ಸೇರಿರಬೇಕು ಎನ್ನುವುದು ಈ ಯೋಜನೆಗೆ ಇರುವ ಪ್ರಮುಖ ಷರತ್ತುಗಳಾಗಿವೆ.
ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಒಂಟಿ ಮನೆ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ತಿಂಗಳಾಂತ್ಯದೊಳಗಾಗಿ ಆಯ್ಕೆಯಾದ ಎಲ್ಲರಿಗೂ ಕಾರ್ಯದೇಶ ನೀಡಿ ಕೆಲಸ ಪ್ರಾರಂಭಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನಿರ್ದೇಶನ ನೀಡಿದ್ದಾರೆ.
ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ 27,585 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ತಂತ್ರಾಂಶದಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಲಭ್ಯವಿದೆ. ಶೀಘ್ರದಲ್ಲೇ ಹೊಸ ಗುರುತಿನ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದ್ದಾರೆ.
ನಗರದ 5 ನಗರ ಪಾಲಿಕೆಗಳಲ್ಲಿ ಈಗಾಗಲೇ ಗುರುತಿನ ಚೀಟಿಗಳ ವಿತರಣಾ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ವಿತರಿಸಿರುವ ಗುರುತಿನ ಚೀಟಿಗಳಲ್ಲಿ ಸರಿಯಾದ ಮಾಹಿತಿ ಲಭ್ಯವಿಲ್ಲವೆಂದು ಬೀದಿ ಬದಿ ವ್ಯಾಪಾರಿಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ಮಾನ್ಯ ಉಚ್ಚ ನ್ಯಾಯಾಲಯವು ಸಂಪೂರ್ಣ ಮಾಹಿತಿಯುಳ್ಳ ಗುರುತಿನ ಚೀಟಿಗಳನ್ನು ವಿತರಿಸಲು ನಿರ್ದೇಶನ ನೀಡಿತ್ತು. ಅದರಂತೆ ಈಗ ಹೊಸ ಮಾದರಿಯಲ್ಲಿ ಗುರುತಿನ ಚೀಟಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ 5 ನಗರ ಪಾಲಿಕೆಗಳಲ್ಲಿ ಅದೇ ಮಾದರಿಯಲ್ಲಿ ಸಿದ್ಧಪಡಿಸಿ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.


