BBMP
Loading ...

Revanna

Greater Bengaluru News9 : ಜೆಡಿಎಸ್ ಎಂಎಲ್​​​ಸಿ ಸೂರಜ್ ರೇವಣ್ಣ (Suraj Revanna) ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಮರುಪರಿಶೀಲನಾ‌ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಆದೇಶ ಹೊರಡಿಸಿದ್ದಾರೆ.

ಇನ್ನು ಜೆಡಿಎಸ್‌ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಡಾ.ಸೂರಜ್‌ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಸೂರಜ್‌ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಈ ಹಿನ್ನೆಲೆ ಸೂರಜ್​ ಒಂದು ತಿಂಗಳ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2024ರ ಜೂನ್ 22 ರಂದು ಸಂತ್ರಸ್ತ ದೂರು ನೀಡಿದ್ದರು. ಇದರ ಆಧಾರದಲ್ಲಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಹಾಸನದ ಜಿಲ್ಲಾ ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಲು ಆಗಮಿಸಿದ್ದರು. ಆದರೆ, ನಂತರ ಅದನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಅದರಂತೆ, ಜೂನ್ 23 ರಂದು ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು.

ಮತ್ತೊಂದೆಡೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬವರು ಸಂತ್ರಸ್ತನ ವಿರುದ್ಧ ಪ್ರತಿ ದೂರು ನೀಡಿದ್ದರು. ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿ, ಐದು ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬ್ಲ್ಯಾಕ್​​ಮೇಲ್ ಮಾಡಿದ್ದರು ಎಂದು ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ರಾಜ್ಯ ಸರ್ಕಾರ, ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.

Leave a Reply

Your email address will not be published. Required fields are marked *