Greater Bengaluru News9 : ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದಾದ್ಯಂತ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ಗುರುವಾರ (ಫೆಬ್ರವರಿ 12) ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರವು ಸಾರ್ವಜನಿಕ ಬ್ಯಾಂಕಿಂಗ್, ಸಾರಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
“ಫೆಬ್ರವರಿ 12 ರಂದು ಕರೆ ನೀಡಲಾಗಿರುವ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ” ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಹೇಳಿದ್ದಾರೆ. ಬಂದ್ 600 ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ(ಎಸ್ಕೆಎಂ) ಸಂಪೂರ್ಣ ಬೆಂಬಲದೊಂದಿಗೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್ಟಿಯುಸಿ), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್ಎಂಎಸ್), ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ ಸೇರಿದಂತೆ 10 ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯ ಸರಕಾರಿ ನೌಕರರು, ಶಿಕ್ಷಕರ ಸಂಘಟನೆಗಳು, ಬ್ಯಾಂಕ್ಗಳ ನೌಕರರು, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಮತ್ತು ಸಂಬಂಧಿತ ಗುತ್ತಿಗೆ ಕಾರ್ಮಿಕರು ರಾಷ್ಟ್ರೀಯ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ. ಮಹಿಳೆಯರು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಮುಷ್ಕರದ ದಿನದಂದು ಬೀದಿಗಿಳಿದು ಪ್ರತಿಭಟನೆ ನಡೆಸಲಿವೆ.
ಮುಷ್ಕರಕ್ಕೆ ಕಾರಣವೇನು?
ಪ್ರಮುಖವಾಗಿ, ಕಳೆದ ವರ್ಷ (2025ರ ನವೆಂಬರ್) ಜಾರಿಗೆ ತಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ರದ್ದುಪಡಿಸುವಂತೆ ಆಗ್ರಹಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ಜತೆಗೆ ಬಿತ್ತನೆ ಬೀಜಗಳ ಮಸೂದೆ–2025, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಹಾಗೂ ಪ್ರಗತಿ ನಿಟ್ಟಿನಲ್ಲಿ ಭಾರತ ಪರಿವರ್ತನೆ (ಶಾಂತಿ) ಮಸೂದೆಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳು ಸೇರಿವೆ. ಅಲ್ಲದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಮರುಸ್ಥಾಪನೆ, ವಿಕಸಿತ ಭಾರತ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025 ರದ್ದತಿ ಮತ್ತು ಭಾರತ- ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದ ರದ್ದುಗೊಳಿಸುವಂತೆಯೂ ಬೇಡಿಕೆಯಿಟ್ಟಿವೆ.
ಶಾಲಾ, ಕಾಲೇಜುಗಳು ಬಂದ್?
ದೇಶದಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಆದಾಗ್ಯೂ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಬಂದ್ಗೆ ತಮ್ಮ ಬೆಂಬಲ ಘೋಷಿಸಿವೆ. ಆಗಾಗಿ ಇಲ್ಲಿ ಶಾಲಾ– ಕಾಲೇಜುಗಳು ಮುಚ್ಚವ ಸಾಧ್ಯತೆಯಿದೆ. ಅದೇ ರೀತಿ, ಸ್ಥಳೀಯ ಸಂಸ್ಥೆಗಳು ಬಂದ್ಗೆ ಬೆಂಬಲ ನೀಡಿದರೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಬಹುದು ಎಂದು ವರದಿಯಾಗಿದೆ.
ಸಾರಿಗೆ, ಬ್ಯಾಂಕಿಂಗ್ ಸೇವೆ ವ್ಯತ್ಯಯ
ಪ್ರತಿಭಟನೆ ಮತ್ತು ಸಂಭವನೀಯ ರಸ್ತೆ ತಡೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಕೂಡ ವ್ಯತ್ಯಯಗೊಳ್ಳಬಹುದು. ಜತೆಗೆ ಮಾರುಕಟ್ಟೆ, ಅಂಗಡಿಗಳು ಮತ್ತು ರೆಸ್ಟೋರೆಂಟ್ಗಳು ಕೂಡ ಮುಚ್ಚಲ್ಪಡಬಹುದು. ಬ್ಯಾಂಕಿಂಗ್ ಸೇವೆಗಳ ಮೇಲೆ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ. ಬ್ಯಾಂಕ್ ಆಫ್ ಬರೋಡಾ, ಎಸ್ಬಿಐ, ಪಿಎನ್ಬಿ ಮತ್ತು ಇನ್ನೂ ಅನೇಕ ಬ್ಯಾಂಕುಗಳು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮುಷ್ಕರದ ವೇಳೆ ಯಾವುದಕ್ಕೆಲ್ಲ ವಿನಾಯಿತಿ?
- ಭಾರತ್ ಬಂದ್ನಿಂದ ಅಗತ್ಯ, ತುರ್ತು ಸೇವೆಗಳಿಗೆ ವಿನಾಯಿತಿ ಇರಲಿದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು, ವೈದ್ಯಕೀಯ ಅಂಗಡಿಗಳು ಮತ್ತು ಔಷಧಾಲಯಗಳು, ಅಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಹಾಲು ವಿತರಣೆ ಮತ್ತು ಪತ್ರಿಕೆ ವಿತರಣಾ ಸೇವೆಗಳ ಮೇಲೆ ಯಾವುದೇ ಪರಿಣಾಮವಿಲ್ಲ.
- ಮುಷ್ಕರದ ಹೊರತಾಗಿಯೂ ಶಬರಿಮಲೆ ಯಾತ್ರಿಕರು ಮತ್ತು ಮಾರಮನ್ ಸಮಾವೇಶದಲ್ಲಿ ಭಾಗವಹಿಸುವವರ ವಾಹನಗಳಿಗೆ ಸಂಚರಿಸಲು ಕೇರಳ ಅವಕಾಶ ನೀಡಿದೆ.
- ದೇಶಾದ್ಯಂತ ವಿಮಾನ ನಿಲ್ದಾಣಗಳು ಕೂಡ ಕಾರ್ಯನಿರ್ವಹಿಸಲಿವೆ. ಭೌತಿಕವಾಗಿ ಬ್ಯಾಂಕಿಂಗ್ ಸೇವೆಗೆ ಪರಿಣಾಮ ಬೀರುವ ಸಾಧ್ಯತೆ ಇದ್ದರೂ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.


