Greater Bengaluru News9 : ಸಣ್ಣ ಉದ್ದಿಮೆಗಳಿಗೆ ಪುಷ್ಟಿ ನೀಡಲು ಆರ್ಬಿಐ (RBI) ತನ್ನ ಅಡಮಾನರಹಿತ ಸಾಲದ ಮಿತಿಯನ್ನು ಏರಿಸಿದೆ. ಆರ್ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಎಂಎಸ್ಎಂಇಗಳಿಗೆ ಅಡಮಾನರಹಿತವಾಗಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. 10 ಲಕ್ಷ ರೂ ಇದ್ದ ಇಂಥ ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ.
ಇದರೊಂದಿಗೆ, ಎಂಎಸ್ಎಂಇಗಳು ಯಾವುದೇ ಸೆಕ್ಯೂರಿಟಿ ಒದಗಿಸುವ ಅಗತ್ಯ ಇಲ್ಲದೇ 20 ಲಕ್ಷ ರೂವರೆಗೆ ಸಾಲ ಪಡೆಯಲು ಅವಕಾಶ ಇರುತ್ತದೆ. ಈ ಕ್ರಮವು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲಕ್ಕೆ ಅವಕಾಶ ಕೊಡುತ್ತದೆ. ಎಂಎಸ್ಎಂಇಗಳು ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಭಾಗವಾಗಿರುವುದರಿಂದ, ಅವುಗಳ ಆರೋಗ್ಯ ಕಾಪಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಇದೂ ಒಂದು.
1,000 ಕೋಟಿ ರೂಗಿಂತ ಕಡಿಮೆ ಫಂಡಿಂಗ್ ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ನೊಂದಾಯಿಸಿಕೊಳ್ಳುವುದು ಕಡ್ಡಾಯಾಗಿರುವುದಿಲ್ಲ. ಹೆಚ್ಚಿನ ಗಾತ್ರದ ಎನ್ಬಿಎಫ್ಸಿಗಳು ಮಾತ್ರವೇ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು. ಹಾಗೆಯೇ, ಕೆಲ ಎನ್ಬಿಎಫ್ಸಿಗಳು 1,000ಕ್ಕಿಂತ ಹೆಚ್ಚು ಶಾಖೆಗಳನ್ನು ತೆರೆಯಲು ಮುಂಚಿತವಾಗಿ ಅನುಮತಿ ಪಡೆಯಬೇಕೆಂದ ನಿಯಮವನ್ನೂ ಸಡಿಲಿಸಲಾಗಿದೆ.
ಇದೇ ವೇಳೆ, ಆರ್ಬಿಐ ಗವರ್ನರ್ ಅವರು ಪೇಮೆಂಟ್ ವಂಚನೆಗೊಳಗಾದ ಗ್ರಾಹಕರಿಗೆ 25,000 ರೂವರೆಗೆ ಪರಿಹಾರ ಒದಗಿಸುವ ಒಂದು ವ್ಯವಸ್ಥೆ ತರುತ್ತಿರುವುದಾಗಿ ತಿಳಿಸಿದ್ದಾರೆ. ಇದು ಸಣ್ಣ ಮೊತ್ತದ ವಂಚನೆಗೆ ಸಿಗಬಹುದಾದ ಪರಿಹಾರ. ಎಂಥ ಟ್ರಾನ್ಸಾಕ್ಷನ್ಗಳಿಗೆ ಇದು ಅನ್ವಯ ಆಗುತ್ತದೆ ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.


