BBMP
Loading ...

Vidhanasoudha

Greater Bengaluru News9 : ರಾಜ್ಯದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಭೂಮಿ ತಂತ್ರಾಂಶದಲ್ಲಿ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಮ್ಯುಟೇಶನ್ (ಹಕ್ಕುಬದಲಾವಣೆ) ಅನುಮೋದನೆಯನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಭೂಕಂದಾಯ ನಿಯಮಗಳು–1966ರ ನಿಯಮ 66ರ ಅನ್ವಯ ಹಕ್ಕುಬದಲಾವಣೆಯ ನಮೂದಿಗೆ ಸಂಬಂಧಿಸಿದಂತೆ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆ ಇಲ್ಲದ ಮ್ಯುಟೇಶನ್ ಪ್ರಕರಣಗಳಲ್ಲಿ ಹಕ್ಕುಬದಲಾವಣೆಯ ನಮೂದುಗಳು ಸ್ವಯಂಚಾಲಿತವಾಗಿ ಜಾರಿಯಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೋಂದಾಯಿತ ಮ್ಯುಟೇಶನ್‌ಗಳಿಗೆ (ಕ್ರಯ, ವಿಭಾಗ, ದಾನ ಮುಂತಾದವು) 7 ದಿನಗಳ ನೋಟಿಸ್ ಅವಧಿ ನಿಗದಿಪಡಿಸಲಾಗಿದೆ. ನೋಂದಾಯಿತವಲ್ಲದ ಮ್ಯುಟೇಶನ್‌ಗಳಿಗೆ (ಪೌತಿ ಮ್ಯುಟೇಶನ್) 15 ದಿನಗಳ ನೋಟಿಸ್ ಅವಧಿ ಇರುತ್ತದೆ.

ಪ್ರಸ್ತುತ ವ್ಯವಸ್ಥೆಯಲ್ಲಿ ಈ ನೋಟಿಸ್ ಅವಧಿಯ ನಂತರ ಹೋಬಳಿಯ ರಾಜಸ್ವ ನಿರೀಕ್ಷಕರು ಮ್ಯುಟೇಶನ್ ಅನುಮೋದನೆ ನೀಡುತ್ತಿದ್ದರು. ಆದರೆ ಹೊಸ ಆದೇಶದಂತೆ, ಆಕ್ಷೇಪಣೆ ಇಲ್ಲದಿದ್ದಲ್ಲಿ ನೋಂದಾಯಿತ ಮ್ಯುಟೇಶನ್‌ಗಳಿಗೆ 8ನೇ ದಿನದ ಮಧ್ಯರಾತ್ರಿ ಮತ್ತು ನೋಂದಾಯಿತವಲ್ಲದ ಮ್ಯುಟೇಶನ್‌ಗಳಿಗೆ 16ನೇ ದಿನದ ಮಧ್ಯರಾತ್ರಿ ತಂತ್ರಾಂಶದಲ್ಲೇ ಸ್ವಯಂಚಾಲಿತವಾಗಿ ಸರ್ವರ್ ಸಿಗ್ನೇಚರ್ ಮೂಲಕ ಅನುಮೋದನೆ ಲಭ್ಯವಾಗಲಿದೆ. ಇದಕ್ಕಾಗಿ ರಾಜಸ್ವ ನಿರೀಕ್ಷಕರ ಅನುಮೋದನೆ ಅಗತ್ಯವಿರುವುದಿಲ್ಲ.

ಆದರೆ ನೋಟಿಸ್ ಅವಧಿಯೊಳಗೆ ಸಂಬಂಧಿಸಿದ ರಾಜಸ್ವ ನಿರೀಕ್ಷಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಈ ಸ್ವಯಂಚಾಲಿತ ಮ್ಯುಟೇಶನ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಮಂಡ್ಯ ಹಾಗೂ ಮದ್ದೂರು ತಾಲ್ಲೂಕುಗಳಲ್ಲಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ.

ಇದೇ ವೇಳೆ, ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಜಮೀನುಗಳು, ಪಿಟಿಸಿಲ್ ಜಮೀನುಗಳು ಹಾಗೂ ಸರ್ಕಾರದ ನಿಬಂಧನೆ ಇರುವ ಜಮೀನುಗಳನ್ನು ಕಡ್ಡಾಯವಾಗಿ ಗುರುತಿಸಿ, ಒಂದು ವಾರದೊಳಗೆ ಫ್ಲಾಗ್ ಮಾಡುವಂತೆ ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡುವಂತೆ ಸರ್ಕಾರ ಆದೇಶಿಸಿದೆ.

Leave a Reply

Your email address will not be published. Required fields are marked *