Greater Bengaluru News9 : ಸಾಂಪ್ರದಾಯಿಕ ಖಾದಿ ಉಡುಪು ಉತ್ತೇಜಿಸಲು ಹಾಗೂ ಸರ್ಕಾರಿ ಖಾದಿ ಗ್ರಾಮದ್ಯೋಗ ಮಂಡಳಿಯನ್ನು ಪ್ರೋತ್ಸಾಹಿಸಲು ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಬಟ್ಟೆ ಧರಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ಡಾ.ರಜನೀಶ್ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ಗ್ರಾಮದ್ಯೋಗ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಇಂದು (ಗುರುವಾರ) ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಹಾಗೂ ಸರ್ಕಾರಿ ನೌಕರರಲ್ಲಿ ಸ್ವದೇಶಿ ಉಡುಪು ಒಲವು ಮೂಡಿಸಲು ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ವಸ್ತ್ರ ಧರಿಸುವಂತೆ ತಿಳಿಸಲಾಗಿದೆ. ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಅನುದಾನಿತ ಸಂಸ್ಥೆಗಳ ನೌಕರರಿಗೂ ಈ ನಿಯಮ ಅನ್ವಯವಾಗಲಿದೆ.
ಸರ್ಕಾರಿ ನೌಕರರು ಖಾದಿ ಬಟ್ಟೆಯನ್ನ ಸರ್ಕಾರಿ ಸ್ವಾಮ್ಯದ ಮಳಿಗೆಗಳಲ್ಲೇ ಖರೀದಿಸಬೇಕು. ಖಾದಿ ಬಟ್ಟೆ ಖರೀದಿಸಲು ನೀಡಲಾಗಿರುವ ರಿಯಾಯಿತಿಗಿಂತ ಶೇ.5ರಷ್ಟು ವಿಶೇಷ ರಿಯಾಯಿತಿ ನೀಡಲು ಮಂಡಳಿ ನಿರ್ಧರಿಸಿದೆ. ಪುರುಷ ನೌಕರರು ಖಾದಿ ಶರ್ಟ್-ಪ್ಯಾಂಟ್ ಅಥವಾ ಓವರ್ ಕೋಟ್ ಧರಿಸಬೇಕು. ಮಹಿಳಾ ನೌಕರರು ಖಾದಿ ಅಥವಾ ಖಾದಿ ಸಿಲ್ಕ್ ಸೀರೆ ಹಾಗೂ ಚೂಡಿದಾರ್ ಧರಿಸಲು ಸಭೆಯಲ್ಲಿ ತೀರ್ಮಾನಿಸಿದೆ.
ಸರ್ಕಾರಿ ನೌಕರರ ದಿನವಾದ ಏಪ್ರಿಲ್ 21ರಿಂದ ಈ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲಿ ಸುತ್ತೋಲೆ ಹೊರಡಿಸಲಿದೆ. ಖಾದಿ ಉಡುಪು ಧರಿಸುವುದನ್ನ ಕಡ್ಡಾಯಗೊಳಿಸಿಲ್ಲ. ಸ್ವಯಂಪ್ರೇರಿತವಾಗಿ ಖಾದಿ ಬಟ್ಟೆ ಧರಿಸುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


