BBMP
Loading ...

High Court

Greater Bengaluru News9: ಗ್ರೇಟರ್​ ಬೆಂಗಳೂರು ಪ್ರಾಧಿಕಾರವು (ಜಿಬಿಎ) ವಾರ್ಡ್​ ಮರುವಿಂಗಡಣೆ ವೇಳೆ ವಾರ್ಡ್​ಗಳ ಹೆಸರು ಬದಲಾವಣೆಗೆ ಅನುಸರಿಸಿರುವ ಮಾನದಂಡಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ.

ಹೆಮ್ಮಿಗೆಪುರ ವಾರ್ಡ್​ ಅನ್ನು ಕೆಂಗೇರಿ ಕೋಟೆ ವಾರ್ಡ್​ ಎಂದು ಬದಲಾಯಿಸಿರುವುದನ್ನು ಪ್ರಶ್ನಿಸಿ ಎಚ್​.ಸಿ. ಬಸವರಾಜಪ್ಪ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು ವಾದಿಸಿ, ಬಿಬಿಎಂಪಿ ರಚನೆಯ ಕಾಲದಿಂದಲೂ ಹೆಮ್ಮಿಗೆಪುರ ವಾರ್ಡ್​ ಅಸ್ತಿತ್ವದಲ್ಲಿದೆ. ಜಿಬಿಎ ರಚನೆಯಾಗಿ ಹೊರಡಿಸಿದ ಮೊದಲು ಕರಡು ಪಟ್ಟಿಯಲ್ಲಿಯೂ ವಾರ್ಡ್​ನ ಹೆಸರು ಹೆಮ್ಮಿಗೆಪುರ ಎಂದೇ ಇತ್ತು. ಸರ್ಕಾರ ನ.19ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಕೂಡ ಅದೇ ಹೆಸರು ಇತ್ತು. ಆದರೆ, ಯಾವುದೇ ಆಕ್ಷೇಪಣೆಗಳನ್ನು ಆಲಿಸದೆ ಡಿ.1ರಂದು ಹೊರಡಿಸಿರುವ ತಿದ್ದುಪಡಿ ಅಧಿಸೂಚನೆಯಲ್ಲಿ ಹೆಮ್ಮಿಗೆಪುರವನ್ನು ಕೆಂಗೇರಿ ಕೋಟೆ ವಾರ್ಡ್​ ಎಂದು ಬದಲಾಯಿಸಲಾಗಿದೆ ಎಂದರು.


ನಿಯಮಗಳಲ್ಲಿ ಈ ರೀತಿ ಬದಲಾವಣೆ ಮಾಡಲು ಅವಕಾಶವಿಲ್ಲ. ಆದರೆ, ಸ್ಥಳಿಯ ಶಾಸಕರ ರಾಜಕೀಯ ಲಾಭಕ್ಕಾಗಿ ಹೆಸರು ಬದಲಾಯಿಸಲಾಗಿದೆ. ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ರ್ನಿದಿಷ್ಟ ಸಮುದಾಯವನ್ನು ಗಮನದಲ್ಲಿರಿಸಿ ಹೆಸರು ಬದಲಾಯಿಸಿದ್ದಾರೆ. ಇದು ಸರಿಯಲ್ಲ ಎಂದು ವಾದಿಸಿದರು.


ವಾದ ಆಲಿಸಿದ ನ್ಯಾಯಪೀಠ, ಮೀಸಲಾತಿ ನಿಗದಿ, ವಾರ್ಡ್​ ವಿಂಗಡಣೆಗಳು ಕಾನೂನು ಪ್ರಕ್ರಿಯೆಯಾಗಿದೆ. ಆದರೆ, ಅದಕ್ಕಾಗಿ ಹೆಸರು ಬದಲಿಸುವ ಅಗತ್ಯವೇನು ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಈ ವೇಳೆ ಅನುಸರಿಸಿರುವ ಮಾನದಂಡವನ್ನು ತಿಳಿಸುವಂತೆ ಸೂಚನೆ ನೀಡಿದ ನ್ಯಾಯಾಲಯ ವಿಚಾರಣೆ ಮುಂದೂಡಿತು.

Leave a Reply

Your email address will not be published. Required fields are marked *