Greater Bengaluru News9 : ಬೆಂಗಳೂರಿನಲ್ಲಿ ಹೊಸ ವರ್ಷ 2026ರ ಸ್ವಾಗತಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಸುರಕ್ಷತೆಗಾಗಿ ಬಿಗಿ ಭದ್ರತಾ ಕ್ರಮಗಳ ಜೊತೆಗೆ ವಿಶೇಷ ಟ್ರಾಫಿಕ್ ನಿಯಂತ್ರಣ ಮತ್ತು ನಿರ್ಬಂಧಗಳನ್ನು ಜಾರಿಗೊಳಿಸಿದೆ. ಡಿಸೆಂಬರ್ 31ರ ಸಂಜೆಯಿಂದ ಜನವರಿ 1ರ ಬೆಳಗಿನವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಡಿಸೆಂಬರ್ 31ರ ರಾತ್ರಿ 8.00 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿ 2.00 ಗಂಟೆಯವರೆಗೆ ಪೊಲೀಸ್ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳ ಸಂಚಾರವನ್ನು ಕೆಳಕಂಡ ರಸ್ತೆಗಳಲ್ಲಿ ನಿಷೇಧಿಸಲಾಗಿದೆ:
- ಎಂ.ಜಿ ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿ ಇರುವ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ
- ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಓಪೇರಾ ಜಂಕ್ಷನ್ ವರೆಗೆ
- ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ
- ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
- ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆ ಜಂಕ್ಷನ್ನಿಂದ ಹಳೆಯ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್ಬಿಐ ವೃತ್ತ) ವರೆಗೆ
- ರೆಸ್ಟ್ ಹೌಸ್ ರಸ್ತೆ: ಮ್ಯೂಸಿಯಂ ರಸ್ತೆ ಜಂಕ್ಷನ್ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ
- ರೆಸಿಡೆನ್ಸಿ ಕ್ರಾಸ್ ರಸ್ತೆ: ರೆಸಿಡೆನ್ಸಿ ರಸ್ತೆ ಜಂಕ್ಷನ್ನಿಂದ ಎಂ.ಜಿ ರಸ್ತೆ ಜಂಕ್ಷನ್ವರೆಗೆ (ಶಂಕರ್ ನಾಗ್ ಚಿತ್ರಮಂದಿರದವರೆಗೆ)
ಪರ್ಯಾಯ ಮಾರ್ಗಗಳ ವ್ಯವಸ್ಥೆ
ಡಿಸೆಂಬರ್ 31ರ ರಾತ್ರಿ 8.00 ಗಂಟೆಯ ನಂತರ ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.
- ಕ್ವೀನ್ಸ್ ವೃತ್ತದಿಂದ ಹಲಸೂರು ಕಡೆಗೆ ತೆರಳುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ – ಬಿಆರ್ವಿ ಜಂಕ್ಷನ್ – ಕಬ್ಬನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ ರಸ್ತೆಗೆ ಸೇರಬೇಕು
- ಹಲಸೂರಿನಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ – ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆ ಸೇರಬೇಕು
- ಕಾಮರಾಜ್ ರಸ್ತೆ: ಕಬ್ಬನ್ ರಸ್ತೆ ಜಂಕ್ಷನ್ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ವಾಹನ ನಿಲುಗಡೆಗೆ ಅವಕಾಶ
- ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲ ತಿರುವು ಪಡೆದು ಎಎಸ್ಇ ಸೆಂಟರ್ನಲ್ಲಿ ಎಡ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು
- ಎಚ್ಎಎಲ್ ಕಡೆಯಿಂದ ಬರುವ ವಾಹನಗಳು ಎಎಸ್ಇ ಸೆಂಟರ್ನಲ್ಲಿ ಬಲ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು
ಪಾದಚಾರಿಗಳಿಗೆ ಸೂಚನೆ
ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ ರಸ್ತೆ ಜಂಕ್ಷನ್ನಿಂದ ಓಪೇರಾ ಜಂಕ್ಷನ್ ಕಡೆಗೆ ಮಾತ್ರ ಪಾದಚಾರಿಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ವಿರುದ್ಧ ದಿಕ್ಕಿನಲ್ಲಿ ಕಾಲ್ನಡಿಗೆಯಲ್ಲಿ ಸಾಗಲು ಅನುಮತಿ ಇರುವುದಿಲ್ಲ.
ಪಾರ್ಕಿಂಗ್ಗೆ ನಿರ್ಬಂಧ
ಡಿಸೆಂಬರ್ 31ರ ಸಂಜೆ 4.00 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 3.00 ಗಂಟೆಯವರೆಗೆ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ:
- ಎಂ.ಜಿ ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ
- ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಓಲ್ಡ್ ಪಿಎಸ್ ಜಂಕ್ಷನ್ ವರೆಗೆ
- ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್ ವರೆಗೆ
- ರೆಸ್ಟ್ ಹೌಸ್ ರಸ್ತೆ: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ
- ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆ ಜಂಕ್ಷನ್ನಿಂದ ಎಸ್ಬಿಐ ವೃತ್ತದವರೆಗೆ
- ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಹಾಗೂ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ಡಿಸೆಂಬರ್ 31ರ ಸಂಜೆ 4.00 ಗಂಟೆಯೊಳಗೆ ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ನಗರ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.


