BBMP
Loading ...

Capture-9

Greater Bengaluru News9 : ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಖಾತೆಗೆ ಜಮೆಯಾಗಿಲ್ಲವೇ? ಯಾವಾಗ ಬರುತ್ತದೆ ಎಂಬ ಮಾಹಿತಿ ಪಡೆಯಲು ಅಧಿಕಾರಿಗಳ ಕಚೇರಿಗೆ ಅಲೆದು ಬೇಸತ್ತಿದ್ದೀರಾ? ಇನ್ನು ಮುಂದೆ ಯಾರ ಬಳಿಗೂ ಹೋಗಬೇಕಿಲ್ಲ. ಇದಕ್ಕಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‘181’ ಸಹಾಯವಾಣಿ ಸೇವೆ ಆರಂಭಿಸಿದೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದು ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯಡಿ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆದರೆ ಕೆಲವೊಮ್ಮೆ ತಾಂತ್ರಿಕ ದೋಷಗಳು, ಇ-ಕೆವೈಸಿ ಪೂರ್ಣಗೊಳಿಸದಿರುವುದು, ತೆರಿಗೆ ಪಾವತಿ ಕಾರಣಗಳು ಅಥವಾ ಇತರೆ ಕಾರಣಗಳಿಂದಾಗಿ ಎರಡು–ಮೂರು ತಿಂಗಳಾದರೂ ಹಣ ಜಮೆಯಾಗದ ಸಮಸ್ಯೆಗಳು ಕಂಡುಬರುತ್ತಿವೆ. ಇಂತಹ ಸಂದರ್ಭಗಳಲ್ಲಿ ಫಲಾನುಭವಿಗಳು ಪದೇಪದೇ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂದೇಶಗಳನ್ನು ಪರಿಶೀಲಿಸುವುದು, ನೆರೆಹೊರೆಯವರನ್ನು ಕೇಳುವುದು ಅಥವಾ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲು ಯತ್ನಿಸುತ್ತಿದ್ದರು.

ಇನ್ನು ಮುಂದೆ ಈ ಸಮಸ್ಯೆಗೆ ‘181’ ಸಹಾಯವಾಣಿ ಮೂಲಕವೇ ಪರಿಹಾರ ಸಿಗಲಿದೆ. 181ಕ್ಕೆ ಕರೆ ಮಾಡಿದರೆ ಅಲ್ಲಿನ ಆಪರೇಟರ್‌ಗಳು ಫಲಾನುಭವಿಗಳಿಂದ ಅಗತ್ಯ ಮಾಹಿತಿಯನ್ನು ಪಡೆದು, ಅವರು ಸೇರಿರುವ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ದೂರು ರವಾನಿಸುತ್ತಾರೆ. ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದು ಫಲಾನುಭವಿಗಳಿಗೆ ಸ್ಪಷ್ಟ ಉತ್ತರ ನೀಡಲಾಗುತ್ತದೆ.

ಈ ಸಹಾಯವಾಣಿ ವಾರದ ಎಲ್ಲ ದಿನಗಳೂ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಾದರೂ ಕರೆ ಮಾಡಿ ಗೃಹಲಕ್ಷ್ಮಿ ಹಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು.

ಇದಲ್ಲದೆ, ಕಚೇರಿ ಅಥವಾ ಮನೆಯಲ್ಲಿಯೇ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ರೀತಿಯ ದೂರುಗಳಿದ್ದರೂ ಸಹ 181 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಗಮನ ನೀಡಲಾಗುವುದು.

Leave a Reply

Your email address will not be published. Required fields are marked *