Greater Bengaluru News9 : ಭಾನುವಾರ (ಡಿ.14) ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ. ರಮೇಶ್ ನೇತೃತ್ವದ ಆರ್ಆರ್ ತಂಡ ಭರ್ಜರಿ ಜಯ ದಾಖಲಿಸಿದೆ. ಚುನಾವಣೆಯಲ್ಲಿ ಆರ್ಆರ್ ತಂಡದ ಆರ್ಭಟಕ್ಕೆ ಎದುರಾಳಿ ಎಸ್ಎಂಕೆ ತಂಡ ನೆಲಕಚ್ಚಿದೆ. ಈ ಬಾರಿ ಸಂಘದ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಎಸ್ಎಂಕೆ ತಂಡಕ್ಕೆ ಭಾರಿ ಮುಖಭಂಗವಾಗಿದೆ.

ಅಂದಹಾಗೆ ಬೆಂಗಳೂರಿನ ಚಂದ್ರಾ ಲೇಔಟ್, 2ನೇ ಫೇಸ್, 1ನೇ ಹಂತದಲ್ಲಿರುವ ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಗುತ್ತಿಗೆದಾರರ ಸಂಘದ ಪಂಚ ವಾರ್ಷಿಕ ಕೇಂದ್ರ ಸಮಿತಿಗೆ ಮತದಾನ ನಡೆಯಿತು. ಬಳಿಕ ನಡೆದ ಮತಎಣಿಕೆಯಲ್ಲಿ ಆರ್ಆರ್ ತಂಡ ಮೇಲುಗೈ ಸಾಧಿಸಿದ್ದು, ಮತ್ತೊಮ್ಮೆ ಸಂಘದ ಅಧಿಕಾರದ ಗದ್ದುಗೆಯನ್ನು ಏರಿದೆ. ಭಾರಿ ಕನಸು ಕಂಡಿದ್ದ ಎಸ್ಎಂಕೆ ತಂಡ ಹೀನಾಯ ಸೋಲಿನೊಂದಿಗೆ ಆರ್ಆರ್ ತಂಡದ ಮುಂದೆ ಮಂಡಿಯೂರಿದೆ.

ಹಾಲಿ ಅಧ್ಯಕ್ಷ ಸಿ ರಮೇಶ್ ನೇತೃತ್ವದ ಆರ್ಆರ್ ತಂಡ, ಕಳೆದ ಅಧಿಕಾರದ ಅವಧಿಯಲ್ಲಿ ಮಾಡಿರುವ ಅನೇಕ ಉತ್ತಮ ಕಾರ್ಯಗಳಿಂದಾಗಿ ಇದೀಗ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಇದೇ ಖುಷಿಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಆರ್ಆರ್ ತಂಡದ ನಾಯಕ ಸಿ. ರಮೇಶ್ ಅವರು ತಮ್ಮ ತಂಡಕ್ಕೆ ಮತ ಹಾಕಿದ ರಾಜ್ಯದ ಎಲ್ಲ ಗುತ್ತಿಗೆದಾರ ಬಂಧುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಕಳೆದ ಅಧಿಕಾರದ ಅವಧಿಯಲ್ಲಿ ಅಧ್ಯಕ್ಷ ರಮೇಶ್ ಅವರ ನೇತೃತ್ವದಲ್ಲಿ ಆರ್ಆರ್ ತಂಡ ಅನೇಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ ಸಾಕಷ್ಟು ಸುಧಾರಣೆಗಳನ್ನು ತಂದಿತು. ಅವರ ಅವಧಿಯಲ್ಲಿ ಸಾಕಷ್ಟು ಹೋರಾಟಗಳು ಸಹ ನಡೆದು, ಸರ್ಕಾರದ ಗಮನಕ್ಕೆ ತಂದೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕಟ್ಟಡಗಳಿಗೆ ಒಸಿ ಹಾಗೂ ಸಿಸಿ ವಿನಾಯಿತಿ ಕೂಡ ರಮೇಶ್ ನೇತೃತ್ವದ ಹೋರಾಟದ ಫಲವಾಗಿದೆ.



