Greater Bengaluru News9: ನಕಲಿ ಗನ್ ತೋರಿಸಿ ಫೈನಾನ್ಸ್ ಕಂಪನಿ ಉದ್ಯೋಗಿಗಳಿಂದ 6.5 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣದಲ್ಲಿ ಬಾಣಸವಾಡಿ ಪೊಲೀಸರು ಬೆಸ್ಕಾಂ ಗುತ್ತಿಗೆದಾರನನ್ನು ಬಂಧಿಸಿದ್ದಾರೆ. ಬಂಧಿತನನ್ನು ನಾರಾಯಣಮೂರ್ತಿ (36) ಎಂದು ಗುರುತಿಸಲಾಗಿದೆ.
ಡಿಸೆಂಬರ್ 10ರಂದು ಮಧ್ಯಾಹ್ನ 2.30ರ ಸುಮಾರಿಗೆ ಹೆಣ್ಣೂರು ಬಳಿ ಈ ಘಟನೆ ನಡೆದಿದೆ. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಫೈನಾನ್ಸಿಯರ್ಗಳಾಗಿ ಕೆಲಸ ಮಾಡುತ್ತಿದ್ದ ಯೋಗೇಶ್ ಹಾಗೂ ರಾಮಲಿಂಗ ಎಂಬುವರಿಗೆ, 69 ಗ್ರಾಂ ಚಿನ್ನ ಬಿಡಿಸಿಕೊಂಡು ಬರುವಂತೆ ಕಂಪನಿಯವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾರಾಯಣಮೂರ್ತಿಯನ್ನು ಸಂಪರ್ಕಿಸಿ ಚಿನ್ನ ವಾಪಸ್ ಪಡೆಯಲು ಮಾತುಕತೆ ನಡೆಸಲಾಗಿತ್ತು.
ಮೈಸೂರಿನಿಂದ ಬೆಂಗಳೂರಿಗೆ ಬಂದ ಯೋಗೇಶ್ ಮತ್ತು ರಾಮಲಿಂಗರು ನಾರಾಯಣಮೂರ್ತಿಯನ್ನು ಹೆಣ್ಣೂರಿನಲ್ಲಿ ಭೇಟಿಯಾಗಿದ್ದರು. ಆರಂಭದಲ್ಲಿ ಚಿನ್ನ ವಾಪಸ್ ಕೊಡುತ್ತೇನೆ ಎಂದ ಆರೋಪಿ ಬಳಿಕ ಮಾತು ಬದಲಿಸಿ 69 ಗ್ರಾಂ ಬದಲು 39 ಗ್ರಾಂ ಮಾತ್ರ ಕೊಡುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೇ ಬ್ಯಾಂಕ್ಗೆ ಹಣ ಕಟ್ಟದೆ ನೇರವಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಫೈನಾನ್ಸ್ ಉದ್ಯೋಗಿಗಳು ಬ್ಯಾಂಕ್ ಮೂಲಕವೇ ಹಣ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮಾತುಕತೆ ವಿಫಲವಾದ ಬಳಿಕ ಇಬ್ಬರೂ ಮೈಸೂರಿಗೆ ವಾಪಸ್ ಹೋಗಲು ಬಸ್ ನಿಲ್ದಾಣದತ್ತ ತೆರಳಿದಾಗ, ನಾರಾಯಣಮೂರ್ತಿ ಸೇರಿದಂತೆ ಮೂವರು ಅವರನ್ನು ಅಡ್ಡಗಟ್ಟಿ ನಕಲಿ ಗನ್ ತೋರಿಸಿ 6.5 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ನಾರಾಯಣಮೂರ್ತಿಯನ್ನು ಬಂಧಿಸಿದ್ದಾರೆ. ದರೋಡೆಗೆ ಸಹಕರಿಸಿದ ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


