Greater Bengaluru News9 : ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ ಯುವಕನ ಅಪಘಾತ ಸಾವಿನ ಪ್ರಕರಣದಲ್ಲಿ ಹೈಕೋರ್ಟ್ ದೊಡ್ಡ ತೀರ್ಪು ನೀಡಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದ 23 ವರ್ಷದ ಅವಿನಾಶ್ ಅವರು 2019ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ (MACT) 18.03 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ಆದರೆ, ವಿಮಾ ಕಂಪನಿ ಈ ಮೊತ್ತ ಹೆಚ್ಚು ಎಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ಪೀಠ, ಹೆಲ್ಮೆಟ್ ಧರಿಸದಿರುವುದು ಮೃತನ ನಿರ್ಲಕ್ಷ್ಯ ಎಂದು ಹೇಳಿ, ಪರಿಹಾರ ಮೊತ್ತದಲ್ಲಿ 40% (7,85,760 ರೂಪಾಯಿ) ಕಡಿತಗೊಳಿಸಿದೆ.
ಹೀಗಾಗಿ, ಈಗ ಕುಟುಂಬಕ್ಕೆ 11,78,640 ರೂ. ಪರಿಹಾರವನ್ನು ಶೇ.6 ಬಡ್ಡಿದರದೊಂದಿಗೆ ಆರು ವಾರದಲ್ಲಿ ಪಾವತಿಸಲು ಹೈಕೋರ್ಟ್ ವಿಮಾ ಕಂಪನಿಗೆ ಸೂಚಿಸಿದೆ.
ಅಪಘಾತ ಹೇಗೆ ನಡೆದಿದೆ?
ಅವಿನಾಶ್ ಅವರು ರಾತ್ರಿ ಸುಮಾರು 8.50ಕ್ಕೆ ಬೈಕ್ನಲ್ಲಿ ಹಿರೇಗುಂಟನೂರಿನಿಂದ ಅಡನೂರಿಗೆ ತೆರಳುತ್ತಿದ್ದಾಗ, ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್ ಹಠಾತ್ ಬ್ರೇಕ್ ಹಾಕಿದ ಪರಿಣಾಮ, ಬೈಕ್ ಟ್ರೈಲರ್ ಹಿಂಬದಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಮೃತಪಟ್ಟರು.
ಕೋರ್ಟ್ನ ತೀರ್ಮಾನ
ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯ 60% ಹಾಗೂ ಮೃತನ ನಿರ್ಲಕ್ಷ್ಯ 40% ಎಂದು ಹೈಕೋರ್ಟ್ ತೀರ್ಮಾನಿಸಿದೆ. ಹೆಲ್ಮೆಟ್ ಧರಿಸದಿರುವುದನ್ನೇ ಪ್ರಮುಖ ಕಾರಣವಾಗಿ ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಕಡಿತ ಮಾಡಲಾಗಿದೆ.


