ಬೆಂಗಳೂರು: ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ಹೊರಡಿಸಿರುವ ಆದೇಶದನ್ವಯ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ದರ್ಶನ್ ಮತ್ತು ಇತರ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವೇ ಇಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ದರ್ಶನ್ ಮತ್ತು ತಂಡಕ್ಕೆ ಜಾಮೀನು ನೀಡುವ ವೇಳೆ ಕರ್ನಾಟಕ ಹೈಕೋರ್ಟ್ ಕೊಟ್ಟಿದ್ದ ಆದೇಶದಲ್ಲಿರುವ ವೈರುಧ್ಯಗಳ ಬಗ್ಗೆ ಸುಪ್ರೀಂಕೋರ್ಟ್ ಎತ್ತಿ ತೋರಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಎಲ್ಲ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಹೀಗಾಗಿ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ. ವೈದ್ಯಕೀಯ ನೆಲೆಯಲ್ಲೇ ಹೈಕೋರ್ಟ್ ಜಾಮೀನು ಕೊಟ್ಟಿತ್ತು. ಹೀಗಾಗಿ ವೈದ್ಯಕೀಯ ಕಾರಣ ಕೊಟ್ಟೂ ಅರ್ಜಿ ಸಲ್ಲಿಸಲಾಗಲ್ಲ ಎಂದು ಕಾನೂನು ತಜ್ಞರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ರಾಜ್ಯ ಸರ್ಕಾರದ ಪರ ವಕೀಲರು ಆರಂಭದಿಂದಲೇ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದರು. ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಆದರೆ, ಈಗ ದೇಶದೆಲ್ಲೆಡೆ ಸುತ್ತಾಡುತ್ತಿದ್ದಾರೆ ಎಂದು ವಿಚಾರಣೆ ವೇಳೆ ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಇದುವರೆಗೂ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ರಕ್ತದ ಒತ್ತಡ ಏರುಪೇರು ನೆಪಮಾತ್ರ. ಅಮಲಾಂಗ್-5 ಎಂಜಿ ಮಾತ್ರೆ ಕೊಟ್ಟರೆ ಬಿಪಿ ನಿಯಂತ್ರಣಕ್ಕೆ ಬರಲಿದೆ. ಬಿಪಿ ಕಡಿಮೆ ಮಾಡಿ ಗಂಭೀರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ದರ್ಶನ್ ನಡವಳಿಕೆ ಸಂಶಯಾರ್ಹ. ಪದೇಪದೆ ಶಸ್ತ್ರಚಿಕಿತ್ಸೆಗೊಳಪಡಿಸಲು ಅಣಿಗೊಳಿಸಲಾಗುತ್ತಿದೆ ಎಂದು ವಾದಿಸಿದ್ದರು.
ದರ್ಶನ್ಗೆ ವಾಟ್ಸ್ಆಪ್ನಲ್ಲೇ ಮೆಮೊ
ನಟ ದರ್ಶನ್ ಕಾರ್ಯನಿಮಿತ್ತ ಎರಡು ದಿನಗಳ ಹಿಂದೆ ಚಾಮರಾಜನಗರಕ್ಕೆ ತೆರಳಿದ್ದರು. ಮಡಿಕೇರಿಯಲ್ಲಿ ಬುಧವಾರ ರಾತ್ರಿ ತಂಗಿದ್ದರು. ಗುರುವಾರ ಮುಂಜಾನೆ ಮೈಸೂರಿಗೆ ಆಗಮಿಸಿದ್ದರು. ಆದರೆ, ಮಧ್ಯಾಹ್ನ 12 ಗಂಟೆಗೆ ನಗರ ಪೊಲೀಸರು ಕರೆ ಮಾಡಲು ಮುಂದಾದರೂ ಸಾಧ್ಯವಾಗಿಲ್ಲ. ವಾಟ್ಸ್ಆಪ್ ಮೂಲಕ ಮೆಮೊ ಕಳುಹಿಸಿ ಶರಣಾಗುವಂತೆ ಸೂಚಿಸಿದರು. ಆರಂಭದಲ್ಲಿ ಉತ್ತರ ನೀಡದ ದರ್ಶನ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಆಗ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಟೋಲ್ಗೇಟ್ನಲ್ಲಿ ದರ್ಶನ್ಗೆ ಸೇರಿದ ಜೀಪು ಮತ್ತು ಕಾರು ಪಾಸಾಗಿರುವ ವಿಡಿಯೋ ಲಭ್ಯವಾಗಿತ್ತು. ನಂತರ ಕರೆ ಮಾಡಿ ಎಚ್ಚರಿಕೆ ನೀಡಲಾಯಿತು. ಆ ನಂತರ ಜೀಪ್ನಲ್ಲಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿಯ ಅಪಾರ್ಟ್ವೆುಂಟ್ಗೆ ಹಿಂಬದಿ ಗೇಟ್ನಿಂದ ಬಂದರು. ಪೊಲೀಸರು ಅಪಾರ್ಟ್ವೆುಂಟ್ನಲ್ಲಿ ಬಂಧಿಸಿ ಅನ್ನಪೂಣೇಶ್ವರಿನಗರ ಠಾಣೆಗೆ ಕರೆತಂದರು. ಠಾಣೆ ಎದುರು ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಚದುರಿಸಿದರು.


