ಬೆಂಗಳೂರು: ರಾಜ್ಯದೆಲ್ಲಡೆ ವರ ಮಹಾಲಕ್ಷ್ಮೀ ಹಬ್ಬದ ಕಳೆ ಹೆಚ್ಚಾಗಿದೆ. ನಾಳೆ (ಆಗಸ್ಟ್ 08) ಮನೆ ಮನೆಯಲ್ಲೂ ಲಕ್ಷ್ಮೀ ದೇವಿಯ ಮೂರ್ತಿಯನ್ನಿಟ್ಟು ಪೂಜಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಬಿಜಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಹಬ್ಬ ಅಂದರೆ ಸಾಕು ಪುಟ್ಪಾತ್ ಮಾತ್ರವಲ್ಲದೇ ರಸ್ತೆಯಲ್ಲೂ ಮಾರಾಟಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಟ್ರಾಫಿಕ್ ಜಾಮ್ನಿಂದ ಸವಾರರು ಪರದಾಡುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ ಮತ್ತು ಸಂಚಾರಿ ಪೊಲೀಸರಿಗೆ ಶಾಪ ಕೂಡ ಹಾಕಿದ್ದೇವೆ. ಆದರೆ, ಇದೀಗ ವಿಜಯನಗರ, ಕಾಮಾಕ್ಷಿ ಪಾಳ್ಯ ಹಾಗೂ ಮಾಗಡಿ ರಸ್ತೆ ಪೊಲೀಸರು ಮಾಡಿದ ಕೆಲಸ ಎಲ್ಲರ ಮೆಚ್ಚುಗೆ ಹಾಗೂ ಇತರರಿಗೆ ಸ್ಫೂರ್ತಿಯಾಗಿದೆ.

ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆಯಲ್ಲಿ ನಗರ ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ವಿಜಯನಗರ, ಕಾಮಾಕ್ಷಿ ಪಾಳ್ಯ ಹಾಗೂ ಮಾಗಡಿ ರಸ್ತೆಯಲ್ಲೂ ಮಾರಾಟ ಜೋರಾಗಿ ನಡೆಯುತ್ತಿದೆ. ಈ ಹಿಂದೆ ಪುಟ್ಪಾತ್ನಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು, ರಸ್ತೆ ಮೇಲೂ ವ್ಯಾಪರ ಮಾಡುತ್ತಿದ್ದರು. ಇದರಿಂದ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿ, ಜನರು ಹೈರಾಣಾಗುತ್ತಿದ್ದರು. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಕಾರಣ, ಪೊಲೀಸರ ಸರಿಯಾದ ಪ್ಲಾನಿಂಗ್.

ಹೌದು, ಈ ಬಾರಿಮ ವಿಜಯನಗರ, ಕಾಮಾಕ್ಷಿಪಾಳ್ಯ ಹಾಗೂ ಮಾಗಡಿ ರಸ್ತೆ ಪೊಲೀಸರು ರಸ್ತೆಗಳಲ್ಲಿ ವ್ಯಾಪಾರಕ್ಕೆ ಅನುಮತಿ ನೀಡದೇ, ಕೇವಲ ಪುಟ್ಪಾತ್ ಮೇಲೆ ಮಾರಾಟ ಮಾಡುವಂತೆ ನೋಡಿಕೊಳ್ಳುತ್ತಿದ್ದಾರೆ. ಯಾರೊಬ್ಬರು ಕೂಡ ರಸ್ತೆ ಮೇಲೆ ಬರುವಂತಿಲ್ಲ. ಸ್ಥಳದಲ್ಲೇ ಪೊಲೀಸರು ಕಾಲಕಾಲಕ್ಕೆ ಚೆಕ್ಕಿಂಗ್ ಮಾಡುತ್ತಿದ್ದಾರೆ. ರಸ್ತೆ ಬಿಟ್ಟು ಪುಟ್ಪಾತ್ ಮೇಲೆ ಬರುವಂತಿಲ್ಲ. ಬಂದ್ರೆ ಕ್ರಮ ಕೈಗೊಳ್ಳುತ್ತಿದ್ದಾರೆ.

ಪೊಲೀಸರ ಈ ಕ್ರಮದಿಂದ ಯಾವುದೇ ಟ್ರಾಫಿಕ್ ಜಾಮ್ ಕಿರಿಕಿರಿ ಇಲ್ಲದೇ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿದೆ. ವ್ಯಾಪಾರಕ್ಕೂ ತೊಂದರೆಯಾಗದಂತೆ ಹಾಗೂ ಜನರು ಮತ್ತು ವಾಹನ ಸಂಚಾರಕ್ಕೂ ಅಡಚಣೆಯಾಗದಂತೆ ವಿಜಯನಗರ, ಕಾಮಾಕ್ಷಿಪಾಳ್ಯ ಮತ್ತು ಮಾಗಡಿ ರಸ್ತೆ ಪೊಲೀಸರು ಜನದಟ್ಟಣೆಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಕಾರ್ಯಕ್ಕೆ ಸ್ಥಳೀಯವಾಗಿ ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಹಬ್ಬದ ನಡುವೆ ಸುಗಮ ಸಂಚಾರಕ್ಕೂ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡ ಪೊಲೀಸರಿಗೆ ಜನರು ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್? ಮಹಾನಗರದ ಗದ್ದುಗೆ ಹಿಡಿಯಲು ಶುರುವಾಯ್ತು ಗುದ್ದಾಟ!


