ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ರಾಜಕೀಯ ಕ್ಷೇತ್ರದಲ್ಲಿ ಸದಾ ಮಿನುಗುವ ನಕ್ಷತ್ರ ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದ್ದಾರೆ.
ಎಚ್.ಡಿ. ದೇವೇಗೌಡ ಅಭಿನಂದನಾ ಸಮಿತಿ ಭಾನುವಾರ ಬಾಬು ಜಗಜೀವನ್ರಾಮ್ ಭವನದಲ್ಲಿ ಆಯೋಜಿಸಲಾಗಿದ್ದ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಎಂ ಮತ್ತು ಪಿಎಂ ಆಗಿ ಮುಂದುವರಿಯಲು ಗೌಡರಿಗೆ ಎಲ್ಲ ಅವಕಾಶಗಳಿದ್ದವು. ಆದರೆ ಅವರು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಕಡಿಮೆ ಅವಧಿಯಲ್ಲಿ ಪ್ರಧಾನಿಮಂತ್ರಿಯಾಗಿದ್ದರೂ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡಿದ್ದಾರೆ ಎಂದರು.
ದೇವೇಗೌಡರು ಬದುಕಿನಲ್ಲಿ ಅತ್ಯುತ್ತಮ ಸಂಸ್ಕಾರ ವನ್ನು ಬೆಳೆಸಿಕೊಂಡಿದ್ದಾರೆ. ಭಕ್ತಿ, ಶ್ರದ್ಧೆ ಮತ್ತು ನಿಷ್ಠೆ ಅಳವಡಿಸಿಕೊಂಡು ಬಂದ ಅಪರೂಪದ ರಾಜಕಾರಣಿ. ಅವರಿಗೆ ಗಟ್ಟಿ ನೆಲೆಯನ್ನು ಒದಗಿಸಿಕೊಟ್ಟಿದ್ದು ವಿರೋಧಪಕ್ಷದ ನಾಯಕ ಸ್ಥಾನ. ಯಾವುದೇ ಅಭ್ಯಾಸ ಇಲ್ಲದ ಒಬ್ಬನೇ ಒಬ್ಬ ರಾಜಕಾರಣಿ. ನೀರಾವರಿ ಸೇರಿ ಎಲ್ಲ ಸಮಸ್ಯೆಗಳ ಬಗ್ಗೆ ದೇವೇಗೌಡರು ತಿಳಿದುಕೊಂಡಿದ್ದವರು ಎಂದು ಶ್ರೀಗಳು ಹೇಳಿದರು.
ರೈತರ ಬಗ್ಗೆ ಅಪಾರ ಕಾಳಜಿ: ಕನ್ನಡಿಗರ ಹೃದಯಲ್ಲಿ ಅಚ್ಚಳಿಯದೆ ಶಾಶ್ವತವಾಗಿ ಉಳಿದಿ ರುವ ಏಕೈಕ ವ್ಯಕ್ತಿ ದೇವೇಗೌಡ. ಅವರು ದೇಶದ ಪ್ರಧಾನಿ ಮಂತ್ರಿಯಾಗಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಪಾಲಕರ ಪಾತ್ರ ಮುಖ್ಯವಾದದ್ದು. ಅದರಂತೆ, ಅವರು ಎತ್ತರಕ್ಕೆ ಬೆಳೆಯಲು ಪಾಲಕರು, ಪತ್ನಿಯೇ ಕಾರಣ. ಅವರ ರಾಜಕೀಯ ಜೀವನ ಆಶ್ಚರ್ಯ ಪಡುವಂತಹ ರೀತಿಯಲ್ಲಿದೆ. ಇಡೀ ಜೀವನವನ್ನು ಸಮಾಜದ ಉದ್ಧಾರಕ್ಕೆ ಅರ್ಪಣೆ ಮಾಡಿದ್ದಾರೆ. ರೈತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗೋದಾವರಿ ನೀರು ಹರಿಸದಂತೆ ಪಿಎಂಗೆ ಪತ್ರ: ಗೋದಾವರಿ ನದಿಯ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ದಶಕಗಳಿಂದಲೂ ಕರ್ನಾಟಕಕ್ಕೆ ನೀರಿನ ವಿಷಯದಲ್ಲಿ ಅನ್ಯಾಯವಾಗುತ್ತಲೇ ಇದೆ. ರಾಜ್ಯದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು, ನೀರು ಹರಿಸದಂತೆ ಒತ್ತಾಯಿಸಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು. ಕರ್ನಾಟಕವು ಮೋದಿ ಸರ್ಕಾರಕ್ಕೆ 17 ಸಂಸದರನ್ನು ನೀಡಿ ಶಕ್ತಿ ತುಂಬಿದೆ. ಅವರು ಕರ್ನಾಟಕಕ್ಕೆ ಅನ್ಯಾಯ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಸಂಸತ್ನಲ್ಲೂ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.
ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಆದಿಚುಂಚನಗಿರಿ ಮಠದ (ವಿಜಯನಗರ ಶಾಖಾ ಮಠ) ಶ್ರೀ ಸೌಮ್ಯನಾಥ ಸ್ವಾಮೀಜಿ, ವಿಶ್ರಾಂತ ಸಿಜೆಐ ಎಂ.ಎನ್. ವೆಂಕಟಾಚಲಯ್ಯ, ಪತ್ರಕರ್ತ ಸುಗತ ಶ್ರೀನಿವಾಸ್ರಾಜು, ಸಂಸದ ಡಾ.ಸಿ.ಎನ್. ಮಂಜುನಾಥ್ ಮತ್ತಿತರರಿದ್ದರು. ಇದೇ ವೇಳೆ ದೇವೇಗೌಡ ಅವರಿಗೆ ಭಾರತ ರತ್ನ ನೀಡಬೇಕೆಂಬುದು ಅಭಿಮಾನಿಗಳು ಒತ್ತಾಯಿಸಿದರು.
ಪ್ರಶಸ್ತಿ ಪ್ರದಾನ
‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ’ಯನ್ನು ಎಚ್.ಡಿ. ದೇವೇಗೌಡ ಅವರಿಗೆ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 93 ಸಾಧಕರಿಗೆ ಎಚ್.ಡಿ. ದೇವೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ದೇವೇಗೌಡರ ಬದುಕು ಮತ್ತು ಸಾಧನೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ರಾಜಕಾರಣಿಯಾಗಿ ದೊಡ್ಡ ಎತ್ತರಕ್ಕೆ ಬೆಳೆದವರು ಎಚ್.ಡಿ. ದೇವೇಗೌಡ. ಅವರು ದೈವಭಕ್ತರು. ದೇಶಕ್ಕೆ ತನ್ನದೇ ಆದ ವಿಶೇಷ ಕೊಡುಗೆ ಕೊಟ್ಟವರು. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ. ಅವರ ಜೀವನವು ನೂರು ವರ್ಷ ಪೂರೈಸಲಿ ಎಂಬುದು ನಮ್ಮ ಆಶಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೇಳಿದರು.
ಸಮಾಜದ ಅಭ್ಯುದಯಕ್ಕಾಗಿ ಪ್ರಾಮಾಣಿಕವಾಗಿ ದುಡಿದಿರುವ ದೇವೇಗೌಡ ಅವರು, ತಮ್ಮ ಅಲ್ಪಾವಧಿ ಅಧಿಕಾರಾವಧಿಯಲ್ಲಿ ತಳ ಮತ್ತು ಹಿಂದುಳಿದ ಪಂಗಡಗಳಿಗೆ ಮೀಸಲಾತಿ ಕಲ್ಪಿಸಿದರು. 11 ತಿಂಗಳಿನ ಅವಧಿಯಲ್ಲಿ ದೇಶದ ಪ್ರಧಾನಿಯಾಗಿ, ಇಡೀ ಜಗತ್ತು ತಿರುಗಿ ನೋಡುವ ರೀತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ತಿಳಿಸಿದರು.
ನಾಡುಕಂಡ ಅಪರೂಪದ ಮುತ್ಸದ್ಧಿ ಎಚ್ಡಿಡಿ, ದೇಶ ಕಂಡ ಜೀವಂತ ದಂತಕಥೆಯಾಗಿದ್ದಾರೆ. ಜೀವನಪರ್ಯಂತ ರೈತರ, ಶ್ರಮಿಕರಿಗಾಗಿ ರಾಜಕಾರಣ ಮಾಡಿದ್ದಾರೆ. ಅವರು ಆದರ್ಶ ರಾಜಕಾರಣಿ. ರಾಜಕೀಯ ಕ್ಷೇತ್ರದಲ್ಲಿ ಅತಿ ಹಿಂದುಳಿದ ವರ್ಗದ ನಾಯಕರನ್ನು ಬೆಳೆಸಿದವರು. ‘ಮಣ್ಣಿನ ಮಗ’ ಎಂಬ ಪ್ರಶಸ್ತಿ ನೀಡಿದವರು ಈ ನೆಲದ ಕೃಷಿಕರು ಮತ್ತು ಶ್ರಮಿಕರು ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಹೇಳಿದರು.
ಸಾಮಾನ್ಯ ವ್ಯಕ್ತಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆಯಬಹುದು ಎಂಬುದನ್ನು ತೋರಿಸಿದವರು ದೇವೇಗೌಡರು, ಸಮಾಜದಲ್ಲಿ ನೂರಾರು ಕಷ್ಟಗಳನ್ನು ಬಗೆಹರಿಸಿದವರು. ಕುಮಾರಸ್ವಾಮಿ ಸಿಎಂ ಆಗಿದ್ದ ತಕ್ಷಣ ಬೆಳಗಾವಿಯಲ್ಲಿ ರಾಮಕೃಷ್ಣ ಆಶ್ರಮಕ್ಕೆ ಜಾಗ ಕೊಟ್ಟಿದ್ದರು.ಇದಕ್ಕೆ ಕಾರಣ ಎಚ್ಡಿಡಿ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕಾಮಾಕ್ಷಿ ಪಾಳ್ಯದ ಶ್ರೀ ಶಿರಡಿ ಸಾಯಿ ರಿಲೀಜಿಯಸ್ ಟ್ರಸ್ಟ್ ವತಿಯಿಂದ ಅದ್ಧೂರಿಯಾಗಿ ಜರುಗಿದ 21ನೇ ವಾರ್ಷಿಕೋತ್ಸವ


