BBMP
Loading ...

BNG Youth

ಬೆಂಗಳೂರು: ಮರದ ಕೊಂಬೆ ಬಿದ್ದು ಯುವಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿಯ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆನಕ್ ರಾಜ್ ಎಂಬುವವರು ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಿಬಿಎಂಪಿಯ ಮೂವರು ಅರಣ್ಯಾಧಿಕಾರಿಗಳಾದ ಆರ್‌ಎಫ್‌ಓ, ಎಸಿಎಫ್, ಡಿಎಫ್‌ಓ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯವೇ ಅಕ್ಷಯ್ ಸಾವಿಗೆ ಕಾರಣವಾಗಿದೆ. ಎ1 ಆರೋಪಿ ಆರ್‌ಎಫ್‌ಓ, ಎ2 ಆರೋಪಿ ಎಸಿಎಫ್, ಎ3 ಆರೋಪಿ ಡಿಎಫ್‌ಓ ಆಗಿದ್ದು, ಯುವಕನ ಸಾವಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಆರೋಪಿಗಳಾಗಿರುವ ಬಿಬಿಎಂಪಿ ಅರಣ್ಯಾಧಿಕಾರಿಗಳಿಗೆ ಕರೆದು ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಘಟನೆ ಏನು?
ಇದೇ ಜೂ.15ರಂದು ಯುವಕ ಅಕ್ಷಯ್ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ ಕೊಂಬೆ ಬಿದ್ದು ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಕೊಂಬೆ ಬೀಳುತ್ತಿದ್ದಂತೆ ನಿಯಂತ್ರಣ ತಪ್ಪಿ ಎದುರುಗಡೆ ನಿಲ್ಲಿಸಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು.

ಶ್ರೀನಿವಾಸನಗರದ ನಿವಾಸಿಯಾಗಿರುವ ಅಕ್ಷಯ್ ರಾಜಾಜಿನಗರದರುವ ಖಾಸಗಿ ಕಂಪನಿಯೊಂದರಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ಮರದ ಕೊಂಬೆ ಬಿದ್ದು ತಲೆಯ ಮಧ್ಯ ಭಾಗಕ್ಕೆ ತೀವ್ರ ಹಾನಿಯಾಗಿತ್ತು. ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿತ್ತು. ಅಕ್ಷಯ್ ತಂದೆಗೆ ಡಯಾಲಿಸಿಸ್ ನಡೆಯುತ್ತಿದ್ದು, ಕುಟುಂಬಕ್ಕೆ ಅಕ್ಷಯ್ ಆಧಾರವಾಗಿದ್ದರು. ಎರಡು ದಿನದ ಹಿಂದೆಯಷ್ಟೇ ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎಂದಿದ್ದರು. ಆದರೆ ಜೂ.19ರ ಮಧ್ಯಾಹ್ನ 1 ಗಂಟೆಗೆ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದರು.

400 ವರ್ಷಗಳಲ್ಲಿ ಇದೇ ಮೊದಲು : ಈ ಬಾರಿ 11 ದಿನ ನಡೆಯಲಿದೆ ವಿಶ್ವವಿಖ್ಯಾತ ಮೈಸೂರು ದಸರಾ

Leave a Reply

Your email address will not be published. Required fields are marked *