BBMP
Loading ...

DK Shivakumar

ಬೆಂಗಳೂರು: ಸೆ.15ರ ಒಳಗಾಗಿ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಗ್ರೇಟರ್ ಬೆಂಗಳೂರು ಸಭೆ ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 15ರಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಜಿಎ) ಆಗಿ ಪರಿವರ್ತನೆಗೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

120 ದಿನಗಳಲ್ಲಿ ನಾವು ಪಾಲಿಕೆಗಳನ್ನು ರಚನೆ ಮಾಡಲೇಬೇಕು. ಹೀಗಾಗಿ ಎಷ್ಟು ಪಾಲಿಕೆ ಮಾಡಬೇಕು ಎಂದು ಬೆಂಗಳೂರಿನ ಎಲ್ಲಾ ಶಾಸಕರ ಬಳಿ ಸಲಹೆಗಳನ್ನು ಕೇಳಿದ್ದೇನೆ. ನಂತರ ಮುಂದೆ ಎಲ್ಲೆಲ್ಲಿ ವಿಸ್ತರಣೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ವಿರೋಧ ಪಕ್ಷದ ನಾಯಕರು ಸೇರಿದಂತೆ ಇನ್ನೂ ಮೂರ್ನಾಲ್ಕು ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲರ ಸಲಹೆ ಪಡೆದ ಬಳಿಕ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ, ಅಂತಿಮ ತೀರ್ಮಾನ ಮಾಡಲಾಗುವುದು. ಸೆಪ್ಟೆಂಬರ್ 15ರ ಒಳಗಾಗಿ ಈ ಪಾಲಿಕೆಗಳು ರಚನೆಯಾಗಬೇಕು ಎಂದಿದ್ದಾರೆ.

ಮಳೆ ಪೀಡಿತ ಪ್ರದೇಶಗಳ ಶಾಸಕರ ಜೊತೆ ಚರ್ಚೆ ಮಾಡಿ, ತುರ್ತು ಕೆಲಸ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ಇದಕ್ಕೆ ಅಗತ್ಯವಿರುವ ಬಜೆಟ್ ಅನ್ನು ಸರ್ಕಾರದಿಂದ ನೀಡುತ್ತೇವೆ. ಟ್ಯಾಂಕರ್ ನೀರಿನ ವಿಚಾರವಾಗಿ ದೂರು ಬಂದಿರುವ ಪ್ರದೇಶಗಳಲ್ಲಿ ಆಯಾ ಋತುವಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಎಲ್ಲಾ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ನಾವು ಅವರಿಗೆ ತಳ್ಳುವ ವಾಹನ ನೀಡಲು ಸಿದ್ಧರಿದ್ದೇವೆ. ನಾವು ನಿಗದಿ ಮಾಡುವ ಜಾಗದಲ್ಲಿ ವಾಹನ ಇಟ್ಟುಕೊಂಡು ವ್ಯಾಪಾರ ಮಾಡಬೇಕು. 3,755 ಜನ ವ್ಯಾಪಾರಿಗಳು ವಾಹನ ಬೇಕು ಎಂದು ಕೇಳಿದ್ದಾರೆ. ನೀವು ಶಾಸಕರ ಮೂಲಕ ಒತ್ತಡ ತರಬೇಡಿ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ನಾವು ಒಂದೇ ಬಾರಿಗೆ ಇದನ್ನು ತೆರವುಗೊಳಿಸಲು ಆಗದಿದ್ದರೂ, ವ್ಯವಸ್ಥಿತವಾಗಿ ಹಂತ ಹಂತವಾಗಿ ಇದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ವಿದ್ಯುತ್​ ಶಾಕ್​: ಬರೋಬ್ಬರಿ 20 ಲಕ್ಷ ರೂ ಬಿಲ್ ನೀಡಿದ ಬೆಸ್ಕಾಂ

Leave a Reply

Your email address will not be published. Required fields are marked *