ಬೆಂಗಳೂರು: ನಗರದಲ್ಲಿ ಫುಟ್‌ಪಾತ್ ಅಂಗಡಿಗಳನ್ನು ತೆರವು ಮಾಡಲಾಗುವುದು. ಈವರೆಗೆ 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ತಳ್ಳುವ ವಾಹನ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಸಭೆ ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಅಗಲೀಕರಣದ ವಿಚಾರವಾಗಿ ಶಾಸಕರ ಜೊತೆ ಚರ್ಚೆ ಮಾಡಲಾಗಿದ್ದು, ಶಾಸಕರು ಎಲ್ಲೆಲ್ಲಿ ರಸ್ತೆ ಅಗಲೀಕರಣ ಆಗಬೇಕು ಎಂದು ಶಿಫಾರಸ್ಸು ಮಾಡುತ್ತಾರೋ, ಅಲ್ಲಿ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲಾಗುವುದು. ಶಾಸಕರು ಆಸ್ತಿ ಮಾಲೀಕರ ಜೊತೆ ಚರ್ಚೆ ಮಾಡಬೇಕು. ರಾಜಕಾಲುವೆ ಅಕ್ಕಪಕ್ಕದ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಿದ್ದು, ನಾವು 300 ಕಿ.ಮೀ ಉದ್ದದ ರಸ್ತೆ ಗುರುತಿಸಿದ್ದು, ಶಾಸಕರು ಕೂಡ ಸುಮಾರು 300 ಕಿ.ಮೀ ಉದ್ದದಷ್ಟು ರಸ್ತೆ ಮಾಡಲು ಶಿಫಾರಸ್ಸು ನೀಡಬಹುದು ಎಂದು ಹೇಳಿದ್ದೇವೆ. ಮುಂದೆ ತಗ್ಗು ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ. ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಸೀವೇಜ್ ಹಾಗೂ ನೀರುಗಾಲುವೆಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಈ ರೀತಿ ಎಳೆದಿರುವ ಕೇಬಲ್‌ಗಳನ್ನು ಕತ್ತರಿಸಿ ಹಾಕಲು ನಾನು ಹೇಳಿದ್ದೇನೆ. ಇನ್ನು ಚರಂಡಿಗಳಲ್ಲಿ ಹೂಳು ಎತ್ತಲು ಸೂಚಿಸಲಾಗಿದೆ ಎಂದರು.
ಎಲ್ಲಾ ಫುಟ್‌ಪಾತ್ ಅಂಗಡಿಗಳ ತೆರವು
“ಬೆಂಗಳೂರಿನ ಎಲ್ಲಾ ಫುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ನಾವು ಅವರಿಗೆ ತಳ್ಳುವ ವಾಹನ ನೀಡಲು ಸಿದ್ಧರಿದ್ದೇವೆ. ನಾವು ನಿಗದಿ ಮಾಡುವ ಜಾಗದಲ್ಲಿ ವಾಹನ ಇಟ್ಟುಕೊಂಡು ವ್ಯಾಪಾರ ಮಾಡಬೇಕು. 3,755 ಜನ ವ್ಯಾಪಾರಿಗಳು ವಾಹನ ಬೇಕು ಎಂದು ಕೇಳಿದ್ದಾರೆ,” ಎಂದು ವಿವರ ನೀಡಿದರು. ನೀವು ಶಾಸಕರ ಮೂಲಕ ಒತ್ತಡ ತರಬೇಡಿ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ನಾವು ಒಂದೇ ಬಾರಿಗೆ ಇದನ್ನು ತೆರವುಗೊಳಿಸಲು ಆಗದಿದ್ದರೂ, ವ್ಯವಸ್ಥಿತವಾಗಿ ಹಂತ ಹಂತವಾಗಿ ಇದನ್ನು ಸರಿಪಡಿಸಲಾಗುವುದು ಎಂದರು.
ನಗರದ 25 ಲಕ್ಷ ಆಸ್ತಿಗಳನ್ನು ಇ-ಖಾತಾ ಮಾಡಲು ಹೇಳಿದ್ದು, ಎಲ್ಲಾ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುತ್ತಿದ್ದು, ಈಗಾಗಲೇ 5 ಲಕ್ಷ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಇದನ್ನು ದೊಡ್ಡ ಅಭಿಯಾನವಾಗಿ ಮಾಡುತ್ತಿದ್ದೇವೆ. ಆಮೂಲಕ ತೆರಿಗೆ ಹಾಗೂ ಆಸ್ತಿ ದಾಖಲಾತಿಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್ ಈ ಗವರ್ನೆನ್ಸ್ ಅವಾರ್ಡ್ ಕೂಡ ಸಿಕ್ಕಿದೆ. ಇನ್ನು ಸ್ಕೈಡೆಕ್ ಅನ್ನು ಹೆಮ್ಮಿಗೆಪುರದಲ್ಲಿ ನಿರ್ಮಿಸಲು ತೀರ್ಮಾನಿಸಿದ್ದೆವು. ಆದರೆ ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರ ಇರಬೇಕು ಎಂಬ ಕಾರಣದಿಂದ ಅಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಇದನ್ನು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ಜಾಗದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ರಸ್ತೆಗಳಲ್ಲಿ ಹಳೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯಿಂದ 100 ಎಕರೆ ಜಾಗ ಒದಗಿಸಿ, ಆ ಎಲ್ಲಾ ವಾಹನಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಂಚಾರ ಪೊಲೀಸರಿಗೆ ಸೂಚಿಸಲಾಗಿದೆ. ಪಾಲಿಕೆ ಕಾನೂನಿನ ಪ್ರಕಾರ 21 ದಿನಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ತೆಗೆಯದಿದ್ದರೆ ಅದನ್ನು ಅನಾಥ ವಾಹನ ಎಂದು ಪರಿಗಣಿಸಿ ಹರಾಜು ಹಾಕಲು ಅವಕಾಶವಿದೆ. ಇನ್ನು ಪೊಲೀಸರು ನಿಗದಿ ಮಾಡುವ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಇನ್ನು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ಮುಖ್ಯ ರಸ್ತೆ ಜೊತೆ ವಿಲೀನ ಮಾಡಿ, ಸುಗಮವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸುಮಾರು 40-50 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆದಿದ್ದು, ಎಲ್ಲರೂ ಒಪ್ಪಿದ್ದಾರೆ ಎಂದು ತಿಳಿಸಿದರು.
ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ: ಡಿಕೆಶಿ ಹೇಳಿಕೆ


