BBMP
Loading ...

BBMP Rain

ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತಷ್ಟು ಚುರುಕು ಪಡೆದುಕೊಂಡಿದೆ. ಎರಡು ದಿನಗಳಿಂದ ಸುರಿದ ಮಳೆ ನಗರದಲ್ಲಿ ತಂಪೆರೆದಿದ್ದರೆ, ಮತ್ತೊಂದೆಡೆ ಭಾರಿ ಅವಾಂತರವನ್ನೂ ಸೃಷ್ಟಿ ಮಾಡಿದೆ. ನಗರದ ಸಾಯಿ ಲೇಔಟ್​​ಗೆ ಜಲ ಕಂಟಕ ಎದುರಾಗಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ.

ಮಳೆಯಿಂದಾಗಿ ಬೆಂಗಳೂರಿನ ಸಾಯಿಲೇಔಟ್​​ ಜಲಾವೃತಗೊಂಡಿದ್ದು, ಇದೇ ವರ್ಷದಲ್ಲಿ 2ನೇ ಬಾರಿ ಸಮಸ್ಯೆ ಎದುರಾಗಿದೆ. ಸಾಯಿ‌ ಮಂದಿರ‌ಕ್ಕೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಹಿಳೆಯೊಬ್ಬರು ಆಯಕ್ತರನ್ನು ತರಾಟೆಗೆ ತೆಗೆದುಕೊಂಡರು.

ಆಯುಕ್ತರನ್ನು ಇಂಗ್ಲೀಷ್ ನಲ್ಲಿ ನಿಮ್ಮ ಹೆಸರೇನು, ನೀವು ಬಿಬಿಎಂಪಿ ಆಯುಕ್ತರೇ ಎಂದು ಪ್ರಶ್ನಿಸಿದರು. ಮಳೆ ಬಂದರೆ ಭಾರೀ ಪ್ರಮಾಣದ ನೀರು ಶೇಖರಣೆಯಾಗುತ್ತಿದೆ. ಬಿಬಿಎಂಪಿಗೆ ಫೋನ್ ಮಾಡಿದರೆ ಸ್ಪಂದಿಸುವುದಿಲ್ಲ. ಪ್ರತಿ ಮಳೆಗೂ ಇದೇ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ಅಧಿಕಾರಿಗಳು ಭೇಟಿ ನೀಡಿದಾಗ ಈ ಬಾರಿ ಸಮಸ್ಯೆ ಪರಿಹರಿಸುತ್ತೇವೆಂದು ಭರವಸೆ ನೀಡಿ ಹೋಗುತ್ತಾರೆ. ಪ್ರತೀ ವರ್ಷವೂ 10 ಸಾವಿರ ಆಸ್ತಿ ತೆರಿಗೆ ಪಾವತಿ ಮಾಡುತ್ತೇವೆ. ಚುನಾವಣೆ ಬಂದರೆ ಮತ ಹಾಕುತ್ತೇವೆ. ಈ ಬಾರಿ ಕಸ ಶುಲ್ಕ ಬೇರೆ ಪಾವತಿ ಮಾಡುತ್ತಿದ್ದೇವೆ. ಆಧರೆ, ನಮ್ಮ ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಎಂದು ಆಖ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ಪ್ರತಿ ವರ್ಷವೂ ಇದೇ ರೀತಿಯ ಪರಿಸ್ಥಿತಿ ಎದುರಾಗುವುದರಿಂದ ಕೆಲವು ಬಾಡಿಗೆದಾರರು ಲೇಔಟ್ ಖಾಲಿ ಮಾಡಿದ್ದಾರೆ. ನಾವು ಕಟ್ಟಡದ ಮಾಲೀಕರು ಆಗಿರುವುದರಿಂದ ಅವರಂತೆ ಖಾಲಿ ಮಾಡಲು ನಮಗೆ ಸಾಧ್ಯವಿಲ್ಲ. ಆಸ್ತಿ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳನ್ನು ಪಾವತಿಸಿದ್ದರೂ, ನಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ ಎಂದು ಹೇಳಿದರು.

ಮತ್ತೊಬ್ಬ ನಿವಾಸಿ ಮಾತನಾಡಿ, ಪ್ರವಾಹ ಪರಿಸ್ಥಿತಿಯಿಂದಾಗಿ ಇಲ್ಲಿನ ಆಸ್ತಿ ಮೌಲ್ಯಗಳೂ ಕೂಡ ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಇರಲೂ ಆಗದೆ, ಮಾರಾಟ ಮಾಡಲೂ ಆಗದೆ ಸಂಕಷ್ಟ ಪಡುತ್ತಿದ್ದೇವೆಂದು ಬೇಸರ ವ್ಯಕ್ತಪಡಿಸಿದರು.

ಎನ್ ಸಿ ಕಾಲೋನಿಯ ಗೃಹಿಣಿ ಭಾರತಿ ಎಂಬುವವರು ಮಾತನಾಡಿ, ಚರಂಡಿಗಳಲ್ಲಿ ಹೂಳು ತೆಗೆಯುವ ಕೆಲಸ ನಡೆದಿಲ್ಲ. ನಂತರ ಮಳೆನೀರು ಎಲ್ಲಿಗೆ ಹೋಗುತ್ತದೆ? ಪ್ರಶ್ನಿಸಿದರು.

VIDEO| ಬಿಬಿಎಂಪಿ ಚುನಾವಣೆ ಈ ವರ್ಷ ಕಳೆಯುವುದರೊಳಗೆ ನಡೆಯಲಿವೆ: ಡಿಕೆ ಶಿವಕುಮಾರ್

Leave a Reply

Your email address will not be published. Required fields are marked *