ಮಾಜಿ ಭೂಗತ ದೊರೆ ಹಾಗೂ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ತಡರಾತ್ರಿ ಗುಂಡಿನ ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ, ಈ ಘಟನೆಗೆ ಇದೇ ಕಾರಣ ಇರಬಹುದು ಎನ್ನುವ ಚರ್ಚೆಗಳು ಕೂಡ ಶುರುವಾಗಿವೆ.
ರಿಕ್ಕಿ ರೈ ಮೇಲೆ ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಶೂಟೌಟ್ ನಡೆದಿದೆ. ಈ ವೇಳೆ ರಿಕ್ಕಿ ರೈ, ಬಿಡದಿ ಮನೆಯಿಂದ ಬೆಂಗಳೂರಿಗೆ ಹೋಗ್ತಿದ್ದರು. ತಮ್ಮ ಮನೆಯ ಹೊರಗಡೆಯ ಕಾಂಪೌಡ್ ಬಳಿ ಶೂಟೌಟ್ ಮಾಡಲಾಗಿದೆ. ಡ್ರೈವರ್ ಹಾಗೂ ಗನ್ ಮ್ಯಾನ್ ಜೊತೆ ಫರ್ಚೂನರ್ ಕಾರ್ನಲ್ಲಿ ರಿಕ್ಕಿ ರೈ ಬೆಂಗಳೂರಿಗೆ ತೆರಳುತ್ತಿದ್ದರು. ದುಷ್ಕರ್ಮಿಗಳು ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಬಿಡದಿಯ ಖಾಸಗಿ ಆಸ್ಪತ್ರಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರಿಕ್ಕಿ ರೈ ಅವರನ್ನು ಶಿಫ್ಟ್ ಮಾಡಲಾಗಿದೆ. ಮುಖ, ಕೈ ಸೇರಿದಂತೆ ಇತರೆ ಭಾಗಗಳಲ್ಲಿ ಗಾಯಗಳಾಗಿವೆ.
ಇನ್ನು ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ, ರಾಕೇಶ್‌ಮಲ್ಲಿ, ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಎಂಬುವರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 173 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆ ಸಂಚಿಗೆ ಕಾರಣ ಏನು? ಆಸ್ತಿ ವಿವಾದ ಇರಬಹುದಾ? ಹೀಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ವತಃ ರಿಕ್ಕಿ ರೈ ಅವರೇ ಅನೇಕ ಸಂದರ್ಭಗಳಲ್ಲಿ ಕಾರು ಚಾಲನೆ ಮಾಡುತ್ತಿದ್ದರು. ಆದರೆ, ನಿನ್ನೆ ಆ ರೀತಿ ಆಗಲಿಲ್ಲ. ರಿಕ್ಕಿ ರೈ ಅವರು ತಮ್ಮ ಗನ್ ಮ್ಯಾನ್ ಮತ್ತು ಚಾಲಕನೊಂದಿಗೆ ಪ್ರಯಾಣ ಬೆಳೆಸಿದರು. ಇತ್ತ ಮನೆಯ ಕಾಂಪೌಂಡ್ ಬಳಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು, ರಿಕ್ಕಿ ರೈ ಕಾರು ಓಡಿಸುತ್ತಿದ್ದಾರೆ ಎಂದು ತಿಳಿದು, ಕಾರಿನ ಸೀಟ್ ಅನ್ನು ಟಾರ್ಗೆಟ್ ಮಾಡಿ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅದೃಷ್ಟವಶಾತ್ ಕಾರು ಚಾಲಕ ರಾಜು ಬಗ್ಗಿದ್ದರಿಂದ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ರಿಕ್ಕಿ ರೈಗೆ ಗುಂಡು ತಗುಲಿದ್ದು, ಮೂಗು ಮತ್ತು ಕೈಗೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಇನ್ನು ರಿಕ್ಕಿ ರೈ ಮೇಲೆ ದಾಳಿ ನಡೆಯಲು ಆಸ್ತಿ ವಿವಾದವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಮುತ್ತಪ್ಪ ರೈ ಮೃತಪಟ್ಟಾಗಿನಿಂದ ಅವರ ಕುಟುಂಬದಲ್ಲಿ ಆಸ್ತಿ ವಿವಾದ ನಡೆಯುತ್ತಲೇ ಇದೆ. ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ವಿರುದ್ಧ ಕೆಲವರು ಸಂಚು ರೂಪಿಸುತ್ತಿದ್ದರು ಎಂದು ಅವರ ಪರ ವಕೀಲ ನಾರಾಯಣಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದರೆ, ಯಾವ ವಿಚಾರಕ್ಕೆ ಗುಂಡಿನ ದಾಳಿ ನಡೆದಿದೆ ಎಂಬುದು ಇನ್ನು ಖಚಿತವಾಗಿ ತಿಳಿದುಬಂದಿಲ್ಲ.
ಈ ಘಟನೆಯ ಬಗ್ಗೆ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಕೂಡ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಬಹಶಃ ಭೂಗತ ಲೋಕದಲ್ಲಿ ಹೆಸರು ಮಾಡಲು ಮಾಡಿರುವ ಒಂದು ಪ್ರಯತ್ನ ಆಗಿರಬಹುದು ಎಂದಿದ್ದಾರೆ. ಇದೆಲ್ಲ ಮುತ್ತಪ್ಪ ರೈ ವಿರೋಧಿಗಳು ಮಾಡಿರುವ ದುಷ್ಕೃತ್ಯ ಆಗಿರಬಹುದು. ಕುಟುಂಬದಲ್ಲೂ ಕೆಲ ಸಮಸ್ಯೆಗಳಿವೆ. ರಿಕ್ಕಿ ರೈ ಅವರು ತಮ್ಮ ಮೊದಲ ಪತ್ನಿಗೆ ಈಗಾಗಲೇ ವಿಚ್ಛೇದನ ನೀಡಿದ್ದಾರೆ. ಎರಡನೇ ಪತ್ನಿ ರಷ್ಯಾ ಮೂಲದವರು. ಇತ್ತೀಚೆಗಷ್ಟೇ ರಷ್ಯಾಗೆ ಹೋಗಿ ಬಂದಿದ್ದರು. ಬಿಡದಿಯಲ್ಲಿರುವ ಅವರ ಮನೆಯಲ್ಲಿ ಕೆಲಸ ನಡೆಯುತ್ತಿದೆ. ಈ ಕಾರಣಕ್ಕೆ ರಿಕ್ಕಿ ಬಿಡದಿ ಮನೆಯಲ್ಲೇ ಇರುತ್ತಿದ್ದರು. ಇನ್ನು ಮುತ್ತಪ್ಪ ರೈ ಆಸ್ತಿ ವಿವಾದದಲ್ಲಿ ಎರಡನೇ ಪತ್ನಿ ಅನುರಾಧ ಜೊತೆಗೂ ಸಮಸ್ಯಗಳಿದ್ದವು. ಇಂದಿನ ಕೊಲೆಯತ್ನಕ್ಕೆ ಈ ವಿಚಾರಗಳನ್ನು ತಳ್ಳಿಹಾಕುವಂತಿಲ್ಲ. ಆದರೆ, ನಿಖರ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಿಕ್ಕಿ ರೈ ಅವರ ಹೇಳಿಕೆಗಳನ್ನು ದಾಖಲಿಸಲಿದ್ದಾರೆ. ಸದ್ಯ ರಿಕ್ಕಿ ರೈ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕಾರು ಚಾಲಕ ನೀಡಿರುವ ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಬಿಡದಿಯಲ್ಲಿ ತಡರಾತ್ರಿ ಗುಂಡಿನ ದಾಳಿ: ರಿಕ್ಕಿ ರೈ ಸ್ಥಿತಿ ಗಂಭೀರ!


