ದಾವಣಗೆರೆ: ಸಾವಿರಾರು ರೂಪಾಯಿ, ಲಕ್ಷಾಂತರ ರೂಪಾಯಿ ಲಂಚ ಪಡೆದ ಅಥವಾ ಲಂಚಕ್ಕಾಗಿ ಪೀಡಿಸುವ ಆರೋಪಗಳನ್ನು ಆಗಾಗ ಅಲ್ಲಲ್ಲಿ ಕೇಳಿರುತ್ತೇವೆ. ಆದರೆ, ದಾವಣಗೆರೆಯ ಜಗಳೂರು ತಾಲೂಕಿನ ಹನಮಂತಾಪುರದಲ್ಲಿ ಪಿಡಿಒ ವಿರುದ್ಧ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ವಿಭಿನ್ನ ಆರೋಪ ಮಾಡಿದ್ದಾರೆ.
ಪಿಡಿಒ ಅವರಿಗೆ ಮೂರು ಸಾವಿರ ರೂಪಾಯಿ ಹಾಗೂ ಮೂರು ಕೆಜಿ ಮಟನ್ ಕೊಟ್ಟಿದ್ದೇನೆ. ಆದರೂ ಮನೆಯ ಇ-ಸ್ವತ್ತು ಆಗುತ್ತಿಲ್ಲ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಎದುರು ಗ್ರಾಮ ಪಂಚಾಯತ್ ಸದಸ್ಯ ಕುಬೇರಪ್ಪ ಆರೋಪ ಮಾಡಿದ್ದಾರೆ.
ಆರೋಪ ಕೇಳಿಬಂದ ತಕ್ಷಣವೇ ಪಿಡಿಒ ಬಳಿ ಡಾ. ನಾಗಲಕ್ಷ್ಮಿ ಚೌಧರಿ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪಿಡಿಒ ಓಬಣ್ಣ, ತಾವು ಅಧಿಕಾರ ವಹಿಸಿ ಮೂರು ತಿಂಗಳಷ್ಟೇ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದಿಂದ ಗರ್ಭಿಣಿಯರಿಗೆ ಆಹಾರ ಸಾಮಗ್ರಿ ಸರಿಯಾಗಿ ತಲುಪುತ್ತಿಲ್ಲ. ಜೊತೆಗೆ ಗ್ರಾಮದಲ್ಲಿ ಅನಾದಿಕಾಲದಿಂದ ಮುಟ್ಟಾದ ಹೆಣ್ಣು ಮಕ್ಕಳನ್ನು ಗ್ರಾಮದ ಹೊರಗಡೆ ಇಡುವ ಪದ್ಧತಿ ಕೆಲವು ಕಡೆ ಇದೆ ಎಂಬ ಆರೋಪಗಳ ಬಗ್ಗೆಯೂ ಚೌಧರಿ ಮಾಹಿತಿ ಪಡೆದಿದ್ದಾರೆ. ಮುಟ್ಟು ಮೈಲಿಗೆ ಅಲ್ಲ. ಮನುಕುಲದ ಸೃಷ್ಟಿಗೆ ಮುಟ್ಟು ಕಾರಣ ಎಂದು ಅವರು ಗ್ರಾಮಸ್ಥರಿಗೆ ಬುದ್ಧಿವಾದ ಹೇಳಿದ್ದಾರೆ.


