BBMP
Loading ...

Ranya

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ತಂದ ಆರೋಪದ ಮೇಲೆ ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್​ ಅವರನ್ನು ಡಿಆರ್‌ಐ ಅಧಿಕಾರಿಗಳು ರಾತ್ರಿ ಬಂಧಿಸಿದ್ದಾರೆ. ದುಬೈನಿಂದ ತರಲಾಗಿದ್ದ ಸುಮಾರು 15 ಕೆಜಿ ಚಿನ್ನವನ್ನು ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

ರನ್ಯಾ ಮೇಲೆ ಅನುಮಾನ
ಇತ್ತೀಚೆಗೆ ರನ್ಯಾ ರಾವ್​, ಆಗಾಗ ದುಬೈಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಅಧಿಕಾರಿಗಳು ಆಕೆಯ ಮೇಲೆ ನಿಗಾ ಇಟ್ಟಿದ್ದರು. ಕೇವಲ 15 ದಿನಗಳ ಅವಧಿಯಲ್ಲಿ ರನ್ಯಾ ನಾಲ್ಕು ಬಾರಿ ದುಬೈಗೆ ಭೇಟಿ ನೀಡಿದ್ದು, ತನ್ನ ಬಟ್ಟೆಗಳಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಬಚ್ಚಿಟ್ಟು ವಾಪಸ್ ತಂದಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರನ್ಯಾ ಅಕ್ರಮವಾಗಿ ತಂದಿದ್ದ 14.8 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಬಳಿಕ ರನ್ಯಾ ಅವರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿ ನ್ಯಾಯಾಧೀಶರು ಆರೋಪಿತೆಗೆ ಮಾರ್ಚ್​ 18ರ ವರೆಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.

ನಟಿ ರನ್ಯಾ ಸೋಮವಾರ (ಮಾ.03) ರಾತ್ರಿ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದರು. ಮೊದಲೇ ಆಕೆಯ ಮೇಲೆ ಅನುಮಾನ ಇದ್ದ ಕಾರಣ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ ಅವರಿಗೆ ಅಚ್ಚರಿಯೊಂದು ಎದುರಾಗಿತ್ತು. ಅದೇನೆಂದರೆ, ಭಾರಿ ಪ್ರಮಾಣದ ಚಿನ್ನ ರನ್ಯಾ ಬಳಿ ಪತ್ತೆಯಾಯಿತು. ಆಕೆ ತಂದಿದ್ದ 14.8 ಕೆಜಿ ಚಿನ್ನದಲ್ಲಿ ಆಕೆ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಇತ್ತಂತೆ. ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಸುತ್ತಿ, ಬ್ಯಾಗ್​ನಲ್ಲಿ ಇಟ್ಟಿರುವುದು ಪತ್ತೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಬಾರಿ ವಿದೇಶಕ್ಕೆ ಹೋಗಿ ಬರುವಾಗ ತನಗಿರುವ ಪ್ರಭಾವಿಗಳ ಸಂಪರ್ಕವನ್ನು ಬಳಸಿಕೊಂಡು ವಿಮಾನ ನಿಲ್ದಾಣದ ಕಸ್ಟಮ್ಸ್‌ ತಪಾಸಣೆಯಿಂದ ರನ್ಯಾ ಪಾರಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಬಾರಿ ಸರಿಯಾಗಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರನ್ಯಾ ಅವರು ಡಿಐಜಿ ರಾಮಚಂದ್ರ ರಾವ್ 2ನೇ ಪತ್ನಿ ಮೊದಲ ಗಂಡನ ಮಗಳಾಗಿದ್ದಾರೆ. ಡಿಆರ್​ಐ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರನ್ಯಾ ಹಿಂದೆ ಬೇರೆ ಯಾರಿದ್ದಾರೆ ಮತ್ತು ಚಿನ್ನದ ಕಳ್ಳಸಾಗಣೆ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ ರನ್ಯಾ ರಾವ್ ಅವರು ನಟ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗಣೇಶ್ ನಟನೆಯ ಪಟಾಕಿ ಸಿನಿಮಾದಲ್ಲಿ ನಟಿಸಿದ್ದಾರೆ.

ಇಡ್ಲಿಯಿಂದ ಡೆಡ್ಲಿ ಕ್ಯಾನ್ಸರ್‌: ಎಚ್ಚೆತ್ತ ಗ್ರಾಹಕರು, ನಗರದ ಜನಪ್ರಿಯ ಹೋಟೆಲ್ ಗಳಲ್ಲಿ ಬೇಡಿಕೆ ಕುಸಿತ..!

Leave a Reply

Your email address will not be published. Required fields are marked *