BBMP
Loading ...

liquor-sale-policy

ಮದ್ಯ ಮಾರಾಟ ಲೈಸೆನ್ಸ್ ಅಕ್ರಮದ ಅಡ್ಡದಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಹೊಸ ಚಿಂತನೆ ನಡೆಸಿದೆ. ಒಬ್ಬರಿಗೆ ಒಂದೇ ‘ಬಾರ್ ಲೈಸೆನ್ಸ್’ ನಿರ್ಬಂಧ ಜಾರಿಗೆ ತರಲು ಇಲಾಖೆ ಮುಂದಾಗಿದ್ದು, ಹಿರಿಯ ಅಧಿಕಾರಿಗಳು ರೂಪುರೇಷೆ ಸಿದ್ಧಪಡಿಸುವ ಕಾರ್ಯ ಆರಂಭಿಸಿದ್ದಾರೆ. ಸದ್ಯ ಒಬ್ಬೊಬ್ಬರೇ ಬೇರೆ ಬೇರೆ ಹೆಸರಲ್ಲಿ ಹತ್ತಾರು ಮದ್ಯ ಮಾರಾಟ ಲೈಸೆನ್ಸ್ ಪಡೆದು ಬಾರ್ ನಡೆಸುತ್ತಿದ್ದಾರೆ. ಕೆಲವರ ಒಡೆತನದಲ್ಲಿ ಬರೋಬ್ಬರಿ 50ಕ್ಕೂ ಅಧಿಕ ಅಂಗಡಿಗಳಿವೆ. ಪ್ರತಿವರ್ಷ ಪರವಾನಗಿ ನವೀಕರಣ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಆಕ್ರಮ ಮತ್ತು ಆದಾಯ ಸೋರಿಕೆ ತಡೆ ಉದ್ದೇಶದಿಂದಲೇ ವೈನ್​ಶಾಪ್ ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ ಹೊಂದಲು ಒಬ್ಬರಿಗೆ ಒಂದೇ ಲೈಸೆನ್ಸ್ ಕೊಡುವ ವ್ಯವಸ್ಥೆ ಜಾರಿಗೊಳಿಸಲು ಇಲಾಖೆ ಮುಂದಾಗಿದೆ. ಇದು ಅನುಷ್ಠಾನಕ್ಕೆ ಬಂದಲ್ಲಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರಲಿದೆ. ಸದ್ಯ ನಗರದ ಪ್ರದೇಶಗಳಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,438 ಸೇರಿ ಒಟ್ಟು 3,948 ಸಿಎಲ್-2 ಅಂಗಡಿ ಕಾರ್ಯ ನಿರ್ವಹಿಸುತ್ತಿವೆ.

ಕೋಟಾದಡಿ ಮಂಜೂರಾಗಿ ಸ್ಥಗಿತಗೊಂಡಿರುವ ಸನ್ನದು, ನವೀಕರಿಸದೆ ಬಾಕಿ ಉಳಿದ ಸಿಎಲ್2 ಸನ್ನದುಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ಸರ್ಕಾರಕ್ಕೆ ಬರಬೇಕಿದ್ದ ನೂರಾರು ಕೋಟಿ ರೂ. ಆದಾಯ ನಷ್ಟವಾಗಿದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲಿ ಕಾರ್ಯನಿರ್ವಹಿಸದ ಸನ್ನದುಗಳನ್ನು ಬಹಿರಂಗ ಹರಾಜು ಹಾಕಲು ಅಬಕಾರಿ ಇಲಾಖೆ ತೀರ್ವನಿಸಿದೆ. ಹರಾಜು ಮುಗಿದ ನಂತರ ಸದ್ಯ ಕಾರ್ಯನಿರ್ವಹಿಸುತ್ತಿರುವ ಬಾರ್ ಮತ್ತು ವೈನ್​ಶಾಪ್​ಗಳನ್ನು ಸರ್ಕಾರದ ವಶಕ್ಕೆ ಪಡೆದು ಒಬ್ಬರಿಗೆ ಒಂದೇ ಲೈಸೆನ್ಸ್ ಎಂಬ ನಿಯಮದಡಿ ಬಹಿರಂಗ ಹರಾಜು ಹಾಕಿದರೆ ಸರ್ಕಾರಕ್ಕೂ ಸಾವಿರಾರು ಕೋಟಿ ರೂ.ಆದಾಯ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರವಾನಗಿ ಪಡೆದು ಮದ್ಯದಂಗಡಿ ತೆರೆದರೆ ಆ ವೈನ್​ಶಾಪ್ ಅಥವಾ ಬಾರ್​ಗೆ ಶಾಶ್ವತವಾಗಿ ಮಾಲೀಕರಾಗಲು ಸಾಧ್ಯವಿಲ್ಲ. ಪ್ರತಿ ವರ್ಷ ಕಡ್ಡಾಯವಾಗಿ ನವೀಕರಣ ಮಾಡಿಸಿದರಷ್ಟೇ ಅಂಗಡಿಯಲ್ಲಿ ವ್ಯಾಪಾರ ಮುಂದುವರಿಸಲು ಮಾಲೀಕರಿಗೆ ಅಧಿಕಾರ ಇರುತ್ತದೆ. ಪರವಾನಗಿ ನವೀಕರಣ ಮಾಡದಿದ್ದರೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಹಾಗಾಗಿ, ಪ್ರತಿವರ್ಷ ಎಲ್ಲ ಮಾದರಿಯ ಪರವಾನಗಿ ನವೀಕರಣ ಮಾಡುವುದಕ್ಕೆ ಇಲಾಖೆ ಅವಕಾಶ ನೀಡುತ್ತಿದೆ. ಶೇ.90 ಮಾಲೀಕರು ತಮ್ಮ ಅಂಗಡಿಗಳನ್ನು ಇಂತಿಷ್ಟು ಶುಲ್ಕ ಪಾವತಿಸಿ ನವೀಕರಣ ಮಾಡಿಸಿಕೊಂಡರೆ ಉಳಿದ ಮಾಲೀಕರು ನವೀಕರಣ ಮಾಡಿಸಿಕೊಳ್ಳುತ್ತಿಲ್ಲ. ಪ್ರತಿವರ್ಷ ನವೀಕರಣ ಕಡ್ಡಾಯವಿರುವುದರಿಂದ ಸರ್ಕಾರ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಂಡು ಒಬ್ಬರಿಗೆ ಒಂದೇ ಪರಾವನಗಿ ನಿಯಮದಡಿ ಪುನಃ ವಿತರಣೆ ಮಾಡುವ ಯೋಜನೆ ರೂಪಿಸಿದೆ.

13,519 ಮದ್ಯದಂಗಡಿ!: ರಾಜ್ಯದಲ್ಲಿ 4,002 ವೈನ್​ಶಾಪ್(ಸಿಎಲ್2), 302 ಕ್ಲಬ್ (ಸಿಎಲ್4),95 ಸ್ಟಾರ್ ಹೋಟೆಲ್ (ಸಿಎಲ್-6ಎ), 2,994 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 71 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,644 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1,071 ಎಂಎಸ್​ಐಎಲ್ (ಸಿಎಲ್11ಸಿ) ಮತ್ತು 745 ಆರ್​ವಿಬಿ, ವೈನ್ ಟವರ್ನ್ 202, ವೈನ್ ಬೋಟಿಕ್ 87 ಸೇರಿ ಒಟ್ಟು 13,519 ಮದ್ಯದಂಗಡಿಗಳಿವೆ. ಸಿಎಲ್-6ಎ, ಸಿಎಲ್4, ಸಿಎಲ್7 ಹೊರತುಪಡಿಸಿ ಹೊಸದಾಗಿ ಸಿಎಲ್2 ಮತ್ತು ಸಿಎಲ್9 ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದನ್ನು 1992ರಿಂದಲೇ ಇಲಾಖೆ ನಿಲ್ಲಿಸಿದೆ. ಆದರೆ, ಈ ಹಿಂದೆಯೇ ಪರವಾನಗಿ ಪಡೆದಿರುವವರು 30 ವರ್ಷಗಳಿಂದ ಮದ್ಯದಂಗಡಿ ನಡೆಸುತ್ತಿದ್ದಾರೆ.

ಹೊಸದಾಗಿ 1,725 ವೈನ್​ಶಾಪ್​ಗೆ ಅವಕಾಶ: ರಾಜ್ಯದಲ್ಲಿ ಹೊಸದಾಗಿ 1,725 ವೈನ್​ಶಾಪ್ ಮಂಜೂರಾತಿ ಮಾಡಲು ಸರ್ಕಾರಕ್ಕೆ ಅವಕಾಶ ಇದೆ. 1981ರ ಜನಗಣತಿ ಆಧಾರದ ಮೇರೆಗೆ ಸಿಎಲ್2 ಕೋಟಾ ನಿಗದಿಪಡಿಸಲಾಗಿದೆ. ಅದರಂತೆ, ರಾಜ್ಯಾದ್ಯಂತ 4,206 ವೈನ್​ಶಾಪ್ ಪೈಕಿ 3,948 ವೈನ್​ಶಾಪ್ ಕಾರ್ಯನಿರ್ವಹಿಸುತ್ತಿವೆ. ಉಳಿದ ಮದ್ಯದಂಗಡಿಗಳು ನವೀಕರಣವಾಗದೆ ಬಾಕಿ ಉಳಿದಿವೆ. ಇದರಲ್ಲಿ ಕೆಲ ವೈನ್​ಶಾಪ್​ಗಳನ್ನು ಎಂಎಸ್​ಐಎಲ್​ಗೆ 2009ರಲ್ಲಿ ನೀಡಲಾಗಿದೆ. ಅಬಕಾರಿ ನಿಯಮದಂತೆ ಹಾಗೂ 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಹೊಸದಾಗಿ 1,725 ವೈನ್​ಶಾಪ್ ಮಂಜೂರು ಮಾಡುವುದಕ್ಕೆ ಸರ್ಕಾರಕ್ಕೆ ಅವಕಾಶ ಇದೆ.

ಹೊಸ ನಿಯಮಕ್ಕಿರುವ ಸಮಸ್ಯೆ
* ರಾಜಕಾರಣಿ, ಪ್ರಭಾವಿಗಳು ಬಾರ್ ಮಾಲೀಕ ರಾಗಿರುವುದರಿಂದ ವಿರೋಧ ಸಾಧ್ಯತೆ
* ಹತ್ತಾರು ಲೈಸೆನ್ಸ್ ಹೊಂದಿರುವವರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಸಾಧ್ಯತೆ
* ಹಳೇ ಲೈಸೆನ್ಸ್ ಜಪ್ತಿ ಮಾಡಿ ಬಹಿರಂಗ ಹರಾಜು ನಡೆಸುವುದು ಅಷ್ಟು ಸುಲಭವಲ್ಲ
* ಹರಾಜು ಪ್ರಕ್ರಿಯೆಯಲ್ಲಿ ಹಣ ಬಲವಿರುವ ವ್ಯಕ್ತಿಗಳಷ್ಟೇ ಭಾಗಿ ಸಾಧ್ಯತೆ ಹೆಚ್ಚು

ಬರೋಬ್ಬರಿ 14.8 KG ಚಿನ್ನ… ನಟಿ ರನ್ಯಾ ರಾವ್ ಬೆಂಗಳೂರು ಏರ್ಪೋರ್ಟ್​ನಲ್ಲಿ ಸಿಕ್ಕಿಬಿದ್ದಿದ್ದೇ ರೋಚಕ!

Leave a Reply

Your email address will not be published. Required fields are marked *