ಬೆಂಗಳೂರು: ಅಕ್ರಮ ಕಟ್ಟಡಉಳಿಸಿಕೊಳ್ಳೋಕೆ ತಪ್ಪು ಮಾಹಿತಿ ಕೊಟ್ಟರೆ ಬಿಬಿಎಂಪಿ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಒಂದು ವೇಳೆ ಮೂಲ ದಾಖಲೆ ತಿದ್ದಲು ಯತ್ನಿಸಿದ್ರೆ ಮಾಲೀಕರಿಗೆ ಇಲ್ಲ ಉಳಿಗಾಲ. ದಾಖಲೆಯಲ್ಲಿನ ಅಂಶಗಳನ್ನು ತಿರುಚಲು ಯತ್ನಿಸಿದ್ರೆ ಅದಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಬೆಂಗಳೂರಿನ ಅನೇಕ ಕಟ್ಟಡ ಮಾಲೀಕರಿಂದ ಬಿಬಿಎಂಪಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಅಕ್ರಮ ಕಟ್ಟಡ ಉಳಿಸಿಕೊಳ್ಳೋಕೆ ಮೂಲ ದಾಖಲೆ ತಿದ್ದುಪಡಿ ಮಾಡಿರುವ ಆರೋಪವಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿಗೆ ತಪ್ಪು ಮಾಹಿತಿ ನೀಡಿದ ಮಾಲೀಕ: ಅಕ್ರಮ ಕಟ್ಟಡ ಮಾಲೀಕನೊಬ್ಬ ಬಿಬಿಎಂಪಿಗೆ ತಪ್ಪು ಮಾಹಿತಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಮಾಲೀಕರು ಕಟ್ಟಡವನ್ನು ಉಳಿಸಿಕೊಳ್ಳೋದಕ್ಕೆ ಮೂಲ ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ. ಈ ರೀತಿಯಾಗಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಪಾಲಿಕೆ ಮುಂದಾಗಿದೆ. ಪಶ್ಚಿಮ ವಲಯದಲ್ಲಿ ನಕಲಿ ದಾಖಲೆ ನೀಡಿ ಖಾತೆ ಹಾಗೂ ಪಾಲಿಕೆಯಿಂದ ಇತರೆ ದಾಖಲಾತಿ ಪಡೆದಿರುವ ಹಿನ್ನೆಲೆ ತೆರವಿಗೆ ಮುಂದಾಗಿದೆ. ಬಿಬಿಎಂಪಿಗೆ ಸಲ್ಲಿಸಿದ ಮೂಲ ದಾಖಲೆಗಳಲ್ಲಿನ ಅಂಶಗಳನ್ನೇ ಮಾಲೀಕರು ತಿರುಚಿದ್ದಾರೆ. ಬಿಬಿಎಂಪಿಗೆ ಮೋಸ ಮಾಡಲು ಮಾಲೀಕರು ಖತರ್ನಾಕ್ ಪ್ಲ್ಯಾನ್ ರೂಪಿಸಿರುವುದು ಕಂಡುಬಂದಿದೆ. ಈ ವಿಚಾರ ಬಿಬಿಎಂಪಿ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಡೆಮಾಲಿಷ್ ಮಾಡಲು ಮುಂದಾಗಿದ್ದಾರೆ.
ಅಕ್ರಮ ಕಟ್ಟಡಗಳ ಸರ್ವೇ: ಬಿಬಿಎಂಪಿ ಅಕ್ರಮ ಕಟ್ಟಡಗಳ ಸರ್ವೇ ಮುಂದುವರೆಸಿದ್ದು, ಪಾಲಿಕೆ ಅಧಿಕಾರಿಗಳು ಇಂದು ಶೇಷಾದ್ರಿಪುರಂನಲ್ಲಿ ಅಕ್ರಮ ಕಟ್ಟಡಗಳ ಅಳತೆ ನಡೆಸುತ್ತಿದ್ದಾರೆ. ಪಶ್ಚಿಮ ವಲಯ ಜಂಟಿ ಎಡಿಟಿಪಿ ಸಮ್ಮುಖದಲ್ಲಿ ಜಮೀನು ಅಳತೆ ಕಾರ್ಯ ನಡೆಯುತ್ತಿದೆ. ಕಟ್ಟಡ ಹಾಗೂ ಜಮೀನು ಮಾಲೀಕರ ಸಮ್ಮುಖದಲ್ಲೇ ಸರ್ವೇ ಮುಂದುವರೆದಿದೆ. ಮನೆ ನಿರ್ಮಿಸಲು ಅಕ್ರಮವಾಗಿ ಭೂಮಿ ಕಬಳಿಸಿರುವ ಆರೋಪದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ.
ಎಚ್ಚರಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ : ಅಕ್ರಮ ನಿರ್ಮಾಣ ತಡೆಗಟ್ಟಲು ಕಠಿಣ ಕ್ರಮಗಳನ್ನು ಒಳಗೊಂಡ ಹೊಸ ಕಾನೂನು ಜಾರಿಗೆ ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಅಕ್ರಮ ಕಟ್ಟಡಗಳ ನಿರ್ಮಾಣ ಮತ್ತು ಅದರಿಂದ ಎದುರಾಗುವ ಅನಾಹುತ ತಡೆಗೆ ಬಿಬಿಎಂಪಿ, ಬಿಡಿಎ ಮತ್ತು ಬಿಎಂಆರ್‌ಡಿಎಗೆ ಹೆಚ್ಚಿನ ಅಧಿಕಾರ ನೀಡಿ, ಕಾನೂನು ಬಿಗಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.


