Greater Bengaluru News9: ಇತ್ತೀಚೆಗಷ್ಟೇ ಕೇರಳ ಮೂಲದ ಶರಣ್ಯ ಎಂಬ ಟೆಕ್ಕಿ, ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದರು. ನಾಲ್ಕು ದಿನಗಳ ಸತತ ಹುಡುಕಾಟ ಬಳಿಕ ಈಕೆಯ ಸುರಕ್ಷಿತವಾಗಿ ವಾಪಾಸ್ ಆಗಿದ್ದು, ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಕೇರಳದ ಶ್ರೀನಂದಾ (15) ಎಂಬ ಬಾಲಕಿ, ತನ್ನ 40 ಮಂದಿಯ ಕುಟುಂಬದೊಂದಿಗೆ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಜಲಪಾತದ ಬಳಿ ಪ್ರವಾಸಕ್ಕೆ ಬಂದಾಗ 2000 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಅರಣ್ಯ ಇಲಾಖೆ, ಇದೀಗ ಚಾರಣ ಪ್ರಿಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.
ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ!
ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಬಿಡುಗಡೆ ಮಾಡಿ ಮಾತನಾಡಿದ ಈಶ್ವರ್ ಖಂಡ್ರೆ, ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರಿರುತ್ತಾರೆ. ಚಾರಣ ಪಥಗಳಲ್ಲಿ ಒಂದು ಬಾರಿಗೆ ಗರಿಷ್ಠ 150 ಜನರಿಗೆ ಮಾತ್ರ ಸೀಮಿತ ಮಾಡಲಾಗುತ್ತದೆ ಎಂದರು.
ಚಾರಣಕ್ಕೆ ಬರುವವರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು. ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆಯುವಂತಾದ ಪ್ರಸಂಗ ಹಾಗೂ ಅರಣ್ಯ ವ್ಯಾಪ್ತಿಗೆ ಒಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಬಾಲಕಿ ಪತ್ತೆಯಾದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಎಸ್‌ಒಪಿ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಚಾರಣಪಥದಲ್ಲಿ ನೇಚರ್ ಗೈಡ್‌ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿಟಾಕಿ ಕಡ್ಡಾಯ. ಮೊಬೈಲ್‌ಗೆ ಚಾರಣಪಥದ ನಕ್ಷೆ ಸಹಿತ ಆ್ಯಪ್ ಅಳವಡಿಸಲಾಗುತ್ತದೆ. ದಾರಿ ತಪ್ಪಿದರೆ ಆ್ಯಪ್ ಸಹಕಾರಿಯಾಗಲಿದೆ. ಚಾರಣಿಗರಿಗೆ ಸಂಕ್ಷಿಪ್ತವಾಗಿ ಚಾರಣದ ದೂರ, ಅವಧಿ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗುವುದು. ಅದೇ ರೀತಿ ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು? ಹೆಚ್ಚು ಶಬ್ದ ಮಾಡುವ ಯಾವುದೇ ಸಾಧನಗಳಿಗೆ, ಹರಿತವಾದ ಲೋಹದ ವಸ್ತು, ಆಯುಧಗಳನ್ನು ತೆಗೆದುಕೊಂಡು ಹೋಗಲು ಮತ್ತು ಕ್ಯಾಂಪ್‌ಫೈರ್‌ಗೆ ಅವಕಾಶ ಇರುವುದಿಲ್ಲ.
ಗೈಡ್‌ಗಳಿಗೆ ಹೊಣೆಗಾರಿಕೆ
ಗೈಡ್‌ಗಳು ಯಾವುದೇ ಚಾರಣಿಗ ತಮಗಿಂತ ಮುಂದೆ ಹೋಗಿಲ್ಲ ಹಾಗೂ ಹಿಂದೆ ಉಳಿದಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಬೇಸ್ ಕ್ಯಾಂಪ್, ವಿಶ್ರಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಚಾರಣಿಗರ ಎಣಿಕೆ ಮಾಡಬೇಕು. ಪ್ರತಿ ಅರ್ಧಗಂಟೆಗೊಮ್ಮೆ ವಾಕಿಟಾಕಿ ಮೂಲಕ ಬೇಸ್ ಕ್ಯಾಂಪ್‌ನೊಂದಿಗೆ ಸಂವಹನ ನಡೆಸಬೇಕು. ಚಾರಣಕ್ಕೂ 1 ಗಂಟೆಯೊಳಗೆ ವಾಕಿಟಾಕಿ ಸಂವಹನ ಗೈಡ್ ಕಡೆಯಿಂದ ನಡೆಯದಿದ್ದರೆ ಬೇಸ್ ಕ್ಯಾಂಪ್ ಸಿಬ್ಬಂದಿಯೇ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ.
ಪ್ರತ್ಯೇಕ ಶೌಚಗೃಹ
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ನೀಡಲಾಗುತ್ತದೆ. ಚಾರಣ ಪಥದಲ್ಲಿ ಬೇಸ್ ಕ್ಯಾಂಪ್‌ಗೆ ಹೋಗುವ ಮಾರ್ಗಸೂಚಿ, ಬಾಣದಾಕಾರದ ಗುರುತು ಹಾಕಲಾಗುವುದು. ಮಾರ್ಗಮಧ್ಯೆ ವಿರಮಿಸಲು ವಿಶ್ರಾಂತಿ ತಾಣ ಇರಲಿದೆ ಎಂದು ತಿಳಿಸಿದರು.
ಅಪ್ರಾಪ್ತರು ಚಾರಣಕ್ಕೆ ತೆರಳಲು ಅವರ ಪಾಲಕರ ಅನುಮತಿ ಪತ್ರ ಕಡ್ಡಾಯ. ಅದೇ ರೀತಿ ಹಿರಿಯ ನಾಗರಿಕರು ಚಾರಣ ಕೈಗೊಳ್ಳಲು ದೈಹಿಕ ಸಾಮರ್ಥ್ಯ ಮತ್ತು ಸದೃಢತೆಯ ಪ್ರಮಾಣಪತ್ರ ಒದಗಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಯಾದರೆ ಅವರ ಆರೈಕೆಗಾಗಿ ಗೈಡ್‌ಗಳು ಪ್ರಥಮ ಚಿಕಿತ್ಸಾ ಕಿಟ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಫ್ಲಾಶ್ ಬಳಸಿ ಫೋಟೋ ತೆಗೆಯುವುದನ್ನು, ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಕ್ಯಾರಿ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯ ಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಉಪಸ್ಥಿತರಿದ್ದರು.


