ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿ ಭಾರಿ ಚರ್ಚೆಯಲ್ಲಿರುವ ವಕ್ಫ್ ಬೋರ್ಡ್ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಹಂಚಿಕೊಂಡ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲ ಕನ್ನಡ ನ್ಯೂಸ್ ವೆಬ್ಸೈಟ್ ಸಂಪಾದಕರ ವಿರುದ್ಧ ದೂರು ದಾಖಲಿಸಲಾಗಿದೆ.
ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದಕ್ಕೆ ಮನನೊಂದು ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯೂಸ್ ವೆಬ್ಸೈಟ್ ಒಂದು ಮಾಡಿದ್ದ ವರದಿಯ ಸ್ಕ್ರೀನ್ಶಾಟ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ಹಾವೇರಿಯಲ್ಲಿ ತನ್ನ ಜಮೀನು ವಕ್ಫ್ ವಶವಾಗಿದೆ ಎಂದು ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸುವ ತರಾತುರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಕರ್ನಾಟಕದಲ್ಲಿ ದುರಂತ ಘಟನೆಗೆ ಸಾಕ್ಷಿಯಾಗಿದ್ದಾರೆ ಮತ್ತು ದಿನಗಳೆದಂತೆ ರೈತರು, ಹಿಂದೂಗಳ ಬದುಕು ದುಸ್ತರವಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.
ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸ್ ಕಚೇರಿಯ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ವಿಭಾಗ ಫ್ಯಾಕ್ಟ್ಚೆಕ್ ಮಾಡಿ, ರೈತ ಸಾವಿಗೀಡಾಗಿದ್ದು ಸಾಲಕ್ಕೆ ಹೆದರಿ ಹೊರತು, ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರಿದೆ ಎಂಬ ಕಾರಣಕ್ಕಲ್ಲ. ಇದು ಸುಳ್ಳು ಸುದ್ದಿ ಎಂದು ಹೇಳಿತ್ತು. ಇದಾದ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ಆದರೆ, ಈ ಬಗ್ಗೆ ಸೊಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ನಲ್ಲಿ ಕೆಲಸ ಮಾಡುತ್ತಿರುವ ಸುನಿಲ್ ಹುಚ್ಚಣ್ಣನವರ ಎಂಬುವರು ನೀಡಿದ ದೂರಿನ ಮೇರೆಗೆ ಸಂಸದ ತೇಜಸ್ವಿ ಸೂರ್ಯ ಮತ್ತು ಘಟನೆಯ ಸತ್ಯಾಸತ್ಯತೆಯನ್ನು ತಿಳಿಯದೇ ಸುದ್ದಿ ಮಾಡಿದ ಕನ್ನಡದ ವೆಬ್ಸೈಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಹಾವೇರಿ ಜಿಲ್ಲೆಯ ಸಿಇಎನ್ (ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು, ಮಾದಕ ದ್ರವ್ಯ) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಏನಿದು ವಕ್ಫ್ ತಿದ್ದುಪಡಿ ಕಾಯ್ದೆ..? ರೈತರಿಗೆ ಹೇಗೆ ತೊಂದರೆಯಾಗುತ್ತದೆ.? ಇಲ್ಲಿದೆ ಸಂಪೂರ್ಣ ಮಾಹಿತಿ


