BBMP
Loading ...

BBMP

ಬೆಂಗಳೂರು: ರಸ್ತೆಗಳ ನಾಮಫಲಕ ಸೇರಿ ವಿವಿಧೆಡೆ ಕನ್ನಡ ಕಡೆಗಣನೆಗೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಕ್ರಮಗಳನ್ನು ಕೈಗೊಂಡು, ಈ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಬಿಎಂಪಿಗೆ ಸೂಚಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಬೇಕಾದ ಬಿಬಿಎಂಪಿ, ಹಲವು ಕಾರಣಗಳಿಂದ ಕನ್ನಡ ವಿರೋಧಿಯೆಂದು ಸಾರ್ವಜನಿಕವಾಗಿ ಬಿಂಬಿತವಾಗುತ್ತಿರುವುದು ವಿಷಾದನೀಯ. ನಾಮಫಲಕಗಳಲ್ಲಿ ತಪ್ಪು ಕನ್ನಡ ಪದಗಳ ಬಳಕೆ, ಪಾಲಿಕೆಯೇ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕನ್ನಡದ ಶೀರ್ಷಿಕೆಗಳು ಕಾಣೆಯಾಗುತ್ತಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕನ್ನಡದ ಹಿತ ಕಾಯಬೇಕಾದ ಸಂಸ್ಥೆಯಿಂದಲೇ ಕನ್ನಡ ಕಡೆಗಣನೆ ಸರಿಯಲ್ಲ. ಭಾಷಾ ಜ್ಞಾನ ಮತ್ತು ಅಭಿಮಾನವುಳ್ಳ ಅಧಿಕಾರಿಗಳನ್ನು ಪಾಲಿಕೆಯ ಸಾರ್ವಜನಿಕ ಸೇವಾ ವಿಭಾಗಗಳಿಗೆ ನೇಮಿಸಬೇಕು. ಕನ್ನಡ ಕಡೆಗಣಿಸಿ ಪ್ರಮಾದ ಮಾಡಿದ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಬಿಬಿಎಂಪಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಬೀದಿ ನಾಯಿಗಳಿಗೆ ಆಹಾರ ನೀಡುವ ಉತ್ಸವಕ್ಕೆ ‘ಕುಕುರ್ ತಿಹಾರ್’ ಎನ್ನುವ ಹೆಸರಿಡಲಾಗಿದೆ. ಈ ಹೆಸರನ್ನು ಇಡುವಾಗ ಕನ್ನಡ ಸಂಸ್ಕೃತಿ ಕುರಿತಾದ ಯಾವುದೇ ಆಲೋಚನೆಗಳು ಪಾಲಿಕೆಯ ಅಧಿಕಾರಿಗಳಲ್ಲಿ ಸುಳಿಯದಿರುವುದು ದುರ್ದೈವ. ಇಂತಹ ಭಾಷಾ ವಿರೋಧಿ ಕ್ರಮಗಳಿಗೆ ಬಿಬಿಎಂಪಿ ಅಂತಹ ಮಹತ್ವದ ಸಂಸ್ಥೆಗಳೇ ಮುಂದಾದರೆ ನಮ್ಮದೇ ನೆಲದಲ್ಲಿ ನಮ್ಮ ಭಾಷೆಗೆ ಸಿಗಬೇಕಾದ ಪ್ರಾತಿನಿಧ್ಯ ಮರೀಚಿಕೆಯಾಗುತ್ತದೆ. ಆದ್ದರಿಂದ ಕೂಡಲೇ ಕನ್ನಡ ವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಪುರುಷೋತ್ತಮ ಬಿಳಿಮಲೆ ಸೂಚಿಸಿದ್ದಾರೆ.

ನಟ ಕಿಚ್ಚ ಸುದೀಪ್ ತಾಯಿ ಸರೋಜಾ ವಿಧಿವಶ

Leave a Reply

Your email address will not be published. Required fields are marked *