ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಂ.ಸಿ ಬಡಾವಣೆಯಲ್ಲಿ ಭಾರಿ ಮಳೆಯಿಂದ ಬೃಹತ್ ಗಾತ್ರದ ಮರವು ಆಟೋ ಮೇಲೆ ಉರುಳಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಾಲಕ ಶಿವರುದ್ರಯ್ಯ ಮೃತಪಟ್ಟರು. ಆಧಾರಸ್ತಂಭ ಕಳೆದುಕೊಂಡು ಬಡವಾಗಿರುವ ಅವರ ಕುಟುಂಬಕ್ಕೆ ಪರಿಹಾರವಾಗಿ ಅರಣ್ಯ ಇಲಾಖೆಯ ವತಿಯಿಂದ 5 ಲಕ್ಷ ಹಾಗೂ ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಕುಟುಂಬಕ್ಕೆ ಶಿವರುದ್ರಯ್ಯ ಸಾವು ಬರಸಿಡಿಲಂತೆ ಅಪ್ಪಳಿಸಿತು. ಶಿವರುದ್ರಯ್ಯ ಸಾವಿಗೆ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯಿಂದ 5 ಲಕ್ಷ ಮತ್ತು ವೈಯಕ್ತಿಕವಾಗಿ 1 ಲಕ್ಷ ರೂ. ನೀಡುವ ಮೂಲಕ ಪರಿಹಾರ ನೀಡಿದ್ದಾರೆ.
ಮೃತ ಶಿವರುದ್ರಯ್ಯ ಅವರು ಹಬ್ಬದ ನಡುವೆಯೂ ಆಟೋ ನಡೆಸಲು ಬಂದಿದ್ದರು. ಈ ವೇಳೆ ಗೋವಿಂದರಾಜನಗರದ ಎಂ.ಸಿ ಲೇಔಟ್ ನಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಮರ ಉರುಳಿ ಬಿದ್ದಿತು. ದುರಂತದಲ್ಲಿ ಆಟೋ ಚಾಲಕನ ತಲೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
ನಾಳೆ ಸೇರಿ ಐದು ದಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತ


