ಮೈಸೂರು: ನಮ್ಮ ಸಮುದಾಯದ ನಾಯಕರ ಹೇಳಿಕೆಗಳು ಬೇರೆ ಸಮುದಾಯದ ಜನರಿಗೆ ಮನರಂಜನೆ ಒದಗಿಸುತ್ತಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಬುದ್ಧವಾಗಿ ಯೋಚನೆ ಮಾಡಿ ನಡೆ ನುಡಿಗಳನ್ನು ಪ್ರದರ್ಶನ ಮಾಡಬೇಕು ಎಂದು ಶ್ರೀ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ನಂಜಾನವಧೂತ ಸ್ವಾಮೀಜಿ ಕಿವಿಮಾತು ಹೇಳಿದರು.
ಒಕ್ಕಲಿಗ ಉದ್ಯಮಿಗಳ ವೇದಿಕೆ ವತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೇದಿಕೆಯ ಪ್ರತಿನಿಧಿಗಳ ಮತ್ತು ಹೂಡಿಕೆದಾರರ ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎಲ್ಲ ಟಿವಿ, ಪತ್ರಿಕೆಗಳಲ್ಲಿ ನಮ್ಮ ನಾಯಕರದ್ದೇ ಸುದ್ದಿ ಕಾಣುತ್ತಿದೆ. ನಾಳೆ ಈ ನಾಯಕರು ಇನ್ಯಾವ ಹೊಸ ಪದ ಪ್ರಯೋಗ ಮಾಡುತ್ತಾರೆ ಎಂದು ಜನರು ಕುತೂಹಲದಿಂದ ನೋಡುವಂತಾಗಿದೆ. ಸಮುದಾಯ ಇವರ ನಡೆ ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಾಗಾಗಿ ಪ್ರಬುದ್ಧವಾಗಿ ಮಾತನಾಡಬೇಕು ಎಂದರು.
ಸಮುದಾಯದ ಹಲವಾರು ಜನರು ನನ್ನನ್ನು ಭೇಟಿಯಾಗಿ ಅವರಿಗೆ ಬುದ್ಧಿ ಹೇಳಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಅವರು ಅತಿರಥ ಮಹಾರಥರು. ಹಾಗಾಗಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ. ಆದರೆ, ಇಬ್ಬರು ನಾಯಕರು ನಡೆಸುತ್ತಿರುವ ವಾಗ್ವಾದ ಸಮಾಜಕ್ಕೆ ಮಾರಕ. ಕಾಲ ಕಾಲಕ್ಕೆ ಅವರನ್ನು ಒಂದು ಮಾಡುವ ಕಾರ್ಯ ಮಾಡಿದ್ದೇವೆ. ಆದರೂ ಕೆಲವೊಂದು ಸಂದರ್ಭ ಕೆಲವು ವಿಚಾರಕ್ಕೆ ಅವರು ಟ್ರಿಗರ್ ಆಗಿ ಮಾತನಾಡುತ್ತಾರೆ. ಅದು ಮುಂದುವರೆದು ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಇವರೇ ಹೊಡೆಸಿಕೊಳ್ಳುವಂತಾಗಿದೆ. ಯಾರು ಸಹ ಹದ್ದು ಮೀರಿ, ಮಿತಿ ಮೀರಿ ಶಬ್ದಗಳನ್ನು ಬಳಕೆ ಮಾಡಬಾರದು ಎಂದು ಹೇಳಿದರು.
ನಾಯಕರ ನಡುವಿನ ವಾಗ್ವಾದ ಸಮಾಜದ ಬೆಳವಣಿಗೆಗೆ ಮಾರಕ. ಅದನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ. ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಹ ಮಾತನಾಡಿದ್ದಾರೆ. ಸಂದರ್ಭ ಬಂದಾಗ ನೇರವಾಗಿ ಸಲಹೆ ನೀಡೋಣ. ಒಕ್ಕಲಿಗ ಸಮುದಾಯದ ನಾಯಕರುಗಳು ಕೆಲವೊಂದು ಸಂದರ್ಭದಲ್ಲಿ ಪ್ರಬುದ್ಧತೆ, ಸೂಕ್ಷ್ಮತೆ ಪ್ರದರ್ಶಿಸುವುದಿಲ್ಲ. ಹಾಗಾಗಿ ಸಮುದಾಯವನ್ನು ಸರ್ಕಾರ ಹಾಗೂ ಬೇರೆ ಸಮುದಾಯಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ಸಮುದಾಯದವರು ಸರಿಯಾದ ಸಂದರ್ಭದಲ್ಲಿ ಶಬ್ಧ ಮಾಡುವುದನ್ನು ಹಾಗೂ ಸರಿಯಾದ ಸಂದರ್ಭದಲ್ಲಿ ಮೌನವಾಗಿರುವುದನ್ನು ಕಲಿಯಬೇಕು. ಈ ವಿಚಾರ ಅರಿಯುವವರೆಗೆ ಇಂತಹ ಆಘಾತಗಳು ಎದುರಾಗುತ್ತದೆ. ಇದರೆ ಒಟ್ಟಾರೆ ಸಮುದಾಯಕ್ಕೆ ನಷ್ಟ ಆಗುತ್ತದೆ. ಅಧಿಕಾರ ಎಂದಿಗೂ ಶಾಶ್ವತವಲ್ಲ. ಈ ವಾಗ್ವಾದ ಹೀಗೆ ಮುಂದುವರೆದರೆ ಒಕ್ಕಲಿಗ ಸಮುದಾಯದವರಿಗೆ ಯಾವಾಗ ಯಾವ ರೀತಿ ಉತ್ತರ ನೀಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ, ಅವರು ಉತ್ತರ ನೀಡುತ್ತಾರೆ. ಬಹಳ ದೊಡ್ಡ ಸಮುದಾಯವಾಗಿರುವ ನಾವು ಪ್ರಬುದ್ಧವಾಗಿ ಸೂಕ್ಷ್ಮವಾಗಿ, ಆಲೋಚಿಸುವುದನ್ನು ಕಲಿಯಬೇಕು ಎಂದರು.
ಆ.17ರಂದು ಬೆಸ್ಕಾಂನಿಂದ ಮಧ್ಯಾಹ್ನ 3 ರಿಂದ 5.30ರವರೆಗೆ ಗ್ರಾಹಕ ಸಂವಾದ ಸಭೆ ಆಯೋಜನೆ


