Greater Bengaluru News9: ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕೋಲಾರ ಜಿಲ್ಲಾ ಪಂಚಾಯತ್‌ನ ನರೇಗಾ ವಿಭಾಗದ ಜೂನಿಯರ್ ಇಂಜಿನಿಯರ್ ಹಾಗೂ ಆತನ ಸಹಾಯಕ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೋಲಾರ ಜಿಲ್ಲಾ ಪಂಚಾಯತ್ ನರೇಗಾ ಕಾಮಗಾರಿಯ ತಾಂತ್ರಿಕ ಇಂಜಿನಿಯರ್ ಕೃಷ್ಣಮೂರ್ತಿ ಹಾಗೂ ಅವರ ಸಹಾಯಕ ಹುಸೇನ್ ಅಲಿ ಲೋಕಾಯುಕ್ತ ದಾಳಿಯಲ್ಲಿ ಬಂಧನಕ್ಕೊಳಗಾದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದ ಗುತ್ತಿಗೆದಾರ ಕೃಷ್ಣಮೂರ್ತಿ ಅವರು ನರೇಗಾ ಯೋಜನೆಯಡಿ ನೆರವೇರಿಸಿದ್ದ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಇಂಜಿನಿಯರ್ ಕೃಷ್ಣಮೂರ್ತಿ ಹಾಗೂ ಸಹಾಯಕ ಹುಸೇನ್ ಅಲಿ ಬರೋಬ್ಬರಿ 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಲಂಚ ನೀಡಲು ಇಷ್ಟವಿಲ್ಲದ ಗುತ್ತಿಗೆದಾರ ಕೃಷ್ಣಮೂರ್ತಿಯವರು ಈ ಕುರಿತು ಕೋಲಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆದಾರನಿಂದ ಮುಂಗಡವಾಗಿ 2 ಲಕ್ಷ ರೂಪಾಯಿ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ, ಇಬ್ಬರನ್ನೂ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.


