Greater Bengaluru News9 : ಕರ್ನಾಟಕದಲ್ಲಿ 1,200 ಚದುರಡಿ ವಿಸ್ತೀರ್ಣವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ (O.C.) ಹಾಗೂ ನಿರ್ಮಾಣ ಮುಕ್ತಾಯ ಪ್ರಮಾಣಪತ್ರ (C.C) ಕಡ್ಡಾಯ ಎಂಬ ನಿಯಮದಿಂದ ವಿನಾಯ್ತಿ ನೀಡಲಾಗಿದ್ದು, ಅದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಸುಮಾರು 33 ಸಾವಿರ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕದ ಅನುಕೂಲ ಸಿಗುವ ಸಾಧ್ಯತೆಗಳಿವೆ.
ಇದೇ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ ನಿಂದ ಸಿಸಿ, ಒಸಿ ಬಗ್ಗೆ ಒಂದು ಆದೇಶ ಹೊರಬಿದ್ದಿತ್ತು. ಅದರಲ್ಲಿ ಸ್ವಾಧೀನ ಪ್ರಮಾಣಪತ್ರ ಹಾಗೂ ನಿರ್ಮಾಣ ಮುಕ್ತಾಯ ಪ್ರಮಾಣಪತ್ರಗಳನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕೊಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ 1,200 ಚದುರಡಿ ವಿಸ್ತೀರ್ಣದವರೆಗಿನ ವಸತಿ ಕಟ್ಟಡಗಳಿಗೆ ಈ ಎರಡೂ ಪ್ರಮಾಣಪತ್ರಗಳಿಂದ ವಿನಾಯ್ತಿ ಘೋಷಿಸಿರುವುದರಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಹಾಗೂ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯೂಎಸ್ಎಸ್ ಬಿ) ಕ್ರಮವಾಗಿ ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕಾಗಿ ಸಲ್ಲಿಸಲಾಗಿದ್ದ CC ಹಾಗೂ OC ಪ್ರಮಾಣಪತ್ರಗಳಿಲ್ಲದ ಸಾವಿರಾರು ಅರ್ಜಿಗಳಿಗೆ ಈಗ ಮುಕ್ತಿ ಸಿಗುವ ವಿಶ್ವಾಸ ಮೂಡಿದೆ.
ಬೆಸ್ಕಾಂನಲ್ಲಿ ಎಷ್ಟು ಅರ್ಜಿ ಬಾಕಿ?
ಬೆಸ್ಕಾಂ ಮೂಲಗಳನ್ನು ಉಲ್ಲೇಖಿಸಿ ಖಾಸಗಿ ಸುದ್ದಿ ಮಾಧ್ಯಮವೊಂದು ಮಾಡಿರುವ ವರದಿಯ ಪ್ರಕಾರ, ಬೆಸ್ಕಾಂನಲ್ಲಿ ಸಿಸಿ, ಒಸಿ ಇಲ್ಲದ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಬಂದಿದ್ದ ಮನವಿಗಳ ಸಂಖ್ಯೆ 33,000 ಇದೆ. ಆ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇತ್ಯರ್ಥಗೊಳಿಸದೇ ಹಾಗೇ ಇಡಲಾಗಿತ್ತು. ಆದರೀಗ, ರಾಜ್ಯ ಸರಕಾರ ಸಿಸಿ, ಒಸಿ ಕಡ್ಡಾಯ ನಿಯಮ ಸಡಿಲಗೊಳಿಸಿರುವುದರಿಂದ ಈ ಎಲ್ಲಾ 33 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲು ಬೆಸ್ಕಾಂ ನಿರ್ಧರಿಸಲಿದೆ.
ಅಲ್ಲದೆ, ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡುವುದರಿಂದ ನೂತನ ವಿದ್ಯುತ್ ಸಂಪರ್ಕಕ್ಕಾಗಿ ಡೆಪಾಸಿಟ್ ಕಟ್ಟಿಸಿಕೊಳ್ಳುವುದು ಇತ್ಯಾದಿ ಸೇವೆಗಳಿಂದ ವಿದ್ಯುತ್ ನಿಗಮಕ್ಕೂ ಒಂದಿಷ್ಟು ಆದಾಯ ಬರಲಿದೆ ಎಂಬುದು ಬೆಸ್ಕಾಂ ಇರಾದೆ. ಹಾಗೆಯೇ, ಬೆಂಗಳೂರು ನೀರು ಸರಬರಾಜು ಮಂಡಳಿಯಲ್ಲೂ ಒಸಿ, ಸಿಸಿ ಇಲ್ಲದಿದ್ದರಿಂದ ಬಾಕಿ ಇರುವ ಸುಮಾರು 24,000 ಅರ್ಜಿಗಳು ವಿಲೇವಾರಿಯಾಗಲಿವೆ. ಇವುಗಳಲ್ಲಿ ಸುಮಾರು 10,000 ಅರ್ಜಿಗಳು ಚಿಕ್ಕ ಸೈಟುಗಳು. ಮೊದಲು ಅವುಗಳಿಗೆ ನೀರಿನ ಸಂಪರ್ಕ ನೀಡಿ, ಆನಂತರ ಮಿಕ್ಕ ಸೈಟುಗಳಿಗೆ ನೀರಿನ ಸಂಪರ್ಕ ನೀಡಲು ನಿರ್ಧರಿಸುವ ಸಾಧ್ಯತೆಗಳಿವೆ.


