Greater Bengaluru News9 : ಅನಧಿಕೃತವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಮೂರು ತಿಂಗಳ ಗಡುವು ನೀಡಲಾಗಿದೆ. ನಿಗದಿತ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ K. J. George ಎಚ್ಚರಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಒಂದು ಕೃಷಿ ಪಂಪ್‌ಸೆಟ್ ಸಂಪರ್ಕವನ್ನು ಸಕ್ರಮಗೊಳಿಸಲು ಸುಮಾರು 4.5 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ ಸರ್ಕಾರ 3 ಲಕ್ಷ ರೂಪಾಯಿಯನ್ನು ಭರಿಸುತ್ತಿದ್ದು, ಉಳಿದ 1.5 ಲಕ್ಷ ರೂಪಾಯಿಯನ್ನು ಬಳಕೆದಾರರು ಪಾವತಿಸಬೇಕು. ಕೆಲವು ಮಂದಿ ಈ ಮೊತ್ತವನ್ನು ಇನ್ನೂ ಪಾವತಿಸದ ಹಿನ್ನೆಲೆಯಲ್ಲಿ, ಅವರಿಗೆ ಮೂರು ತಿಂಗಳ ಅವಧಿ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಮೇಲ್ಮನೆ ಸದಸ್ಯ ಗೋವಿಂದರಾಜ್ ಮಾತನಾಡಿ, ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದ ವೆಚ್ಚ ಮತ್ತು ಸರ್ಕಾರ ಭರಿಸುತ್ತಿರುವ ಮೊತ್ತದ ನಡುವೆ ವ್ಯತ್ಯಾಸವಿದೆ ಎಂದು ಗಮನ ಸೆಳೆದರು. ಎಸ್ಕಾಂಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲದ ಮೊತ್ತ 45 ಸಾವಿರ ಕೋಟಿ ರೂಪಾಯಿ ಮೀರಿದೆ ಎಂದರು. ಕರ್ನಾಟಕ ವಿದ್ಯುತ್ ನಿಗಮಕ್ಕೆ ಬರಬೇಕಾದ ಬಾಕಿ ಸುಮಾರು 19 ಸಾವಿರ ಕೋಟಿ ರೂಪಾಯಿ ಇದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, Karnataka Electricity Regulatory Commission ಅನುಮತಿ ಪಡೆದು ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾಲ ಪಡೆಯುವುದು ಅನಿವಾರ್ಯವಾಗಿದೆ ಎಂದರು.
ಪ್ರಸ್ತುತ ಒಟ್ಟು ಸಾಲದ ಮೊತ್ತ 42,750 ಕೋಟಿ ರೂಪಾಯಿ ಆಗಿದ್ದು, BESCOMನಲ್ಲಿ ಮಾತ್ರವೇ ಕಳೆದ ಫೆಬ್ರವರಿ ಅಂತ್ಯಕ್ಕೆ 17,556 ಕೋಟಿ ರೂಪಾಯಿ ಸಾಲವಿದೆ ಎಂದು ವಿವರಿಸಿದರು.
ಸರ್ಕಾರವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸುತ್ತಿದ್ದು, ಗೃಹಜ್ಯೋತಿ ಮತ್ತು ಕೃಷಿ ಪಂಪ್‌ಸೆಟ್ ಸಬ್ಸಿಡಿ ಯೋಜನೆಗಳ ಹಣವನ್ನು ಎಸ್ಕಾಂಗಳಿಗೆ ನಿಯಮಿತವಾಗಿ ಪಾವತಿಸಲಾಗುತ್ತಿದೆ. ವಿದ್ಯುತ್ ನಿರ್ವಹಣೆ ಹಾಗೂ ದುರಸ್ತಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


