Greater Bengaluru News9: ಭಾರತದಲ್ಲಿ ಅಡುಗೆ ಅನಿಲದ ಬೇಡಿಕೆ ವರ್ಷದಿಂದ ವರ್ಷಕ್ಕೆ ಗಗನಕ್ಕೇರುತ್ತಿದೆ. ಆದರೆ ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಈ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ತೈಲ ಕಂಪನಿಗಳು ಹರಸಾಹಸ ಪಡುತ್ತಿವೆ. ಈ ಬಿಕ್ಕಟ್ಟನ್ನು ನೀಗಿಸಲು ಸಿಲಿಂಡರ್ನ ಗಾತ್ರ ಮತ್ತು ತೂಕವನ್ನು ಕಡಿಮೆ ಮಾಡುವ ಪ್ರಸ್ತಾವನೆ ಬಂದಿದೆ.
ತೂಕ ಇಳಿಕೆಯ ಹಿಂದಿನ ಅನಿವಾರ್ಯತೆ ಏನು?
ದೇಶದಲ್ಲಿ ಎಲ್ಪಿಜಿ ಬಿಕ್ಕಟ್ಟು ತಲೆದೋರಿರುವುದು ಈ ಬದಲಾವಣೆಗೆ ಮುಖ್ಯ ಕಾರಣವಾಗಿ ಪರಿಣಮಿಸಿದೆ. ಅಂಕಿ-ಅಂಶಗಳ ಪ್ರಕಾರ ಹೇಳುವುದಾದರೆ ಭಾರತದಲ್ಲಿ ಗೃಹಬಳಕೆಯ ಸಿಲಿಂಡರ್ಗಳಿಗಾಗಿ ಪ್ರತಿದಿನ ಸರಾಸರಿ 80,400 ಟನ್ ಎಲ್ಪಿಜಿ ಅಗತ್ಯವಿದೆ. ವಾಣಿಜ್ಯ ಮತ್ತು ಗೃಹಬಳಕೆ ಸೇರಿ ದೇಶದಲ್ಲಿ ದಿನವೊಂದಕ್ಕೆ ಒಟ್ಟು 93,500 ಟನ್ ಎಲ್ಪಿಜಿ ಬೇಕಾಗುತ್ತದೆ. ಪ್ರಸ್ತುತ ಅಗತ್ಯವಿರುವ ಪ್ರಮಾಣದಲ್ಲಿ ಎಲ್ಪಿಜಿ ಪೂರೈಕೆ ಮಾಡಲು ಆಗುತ್ತಿಲ್ಲ. ಹೀಗಾಗಿ ಸಿಲಿಂಡರ್ ತೂಕವನ್ನು 14.2 ಕೆ.ಜಿ.ಯಿಂದ 10 ಕೆ.ಜಿ.ಗೆ ಇಳಿಸುವುದರಿಂದ, ಲಭ್ಯವಿರುವ ಅನಿಲವನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂಬುದು ತೈಲ ಕಂಪನಿಗಳ ಲೆಕ್ಕಾಚಾರವಾಗಿದೆ.
10 ಕೆ.ಜಿ. ಸಿಲಿಂಡರ್ಗೆ ಅದರಲ್ಲಿರುವ ಅನಿಲದ ಪ್ರಮಾಣಕ್ಕೆ ತಕ್ಕಷ್ಟು ಮಾತ್ರವೇ ಹಣ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದ ಒಟ್ಟಾರೆ ಸಿಲಿಂಡರ್ ಬೆಲೆ ಕಡಿಮೆಯಾಗಿ ಕಾಣುವುದರಿಂದ ಮಧ್ಯಮ ವರ್ಗದವರಿಗೆ ಒಂದು ಬಾರಿಯ ಖರೀದಿಗೆ ಹಣ ಹೊಂದಿಸುವುದು ಸುಲಭವಾಗಬಹುದು.14.2 ಕೆ.ಜಿ. ತೂಕದ ಸಿಲಿಂಡರ್ ಎತ್ತುವುದು ಅಥವಾ ಸಾಗಿಸುವುದು ವಯಸ್ಸಾದವರಿಗೆ ಅಥವಾ ಮಹಿಳೆಯರಿಗೆ ಕಷ್ಟವಾಗುತ್ತಿತ್ತು. 10 ಕೆ.ಜಿ.ಯ ಹಗುರವಾದ ಸಿಲಿಂಡರ್ಗಳು (ಕಾಂಪೋಸಿಟ್ ಸಿಲಿಂಡರ್ ಮಾದರಿ) ಬಳಕೆಗೆ ಹೆಚ್ಚು ಸುಲಭವಾಗಿರಲಿವೆ.
ಸದ್ಯ ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಬರುತ್ತಿರುವುದರಿಂದ, ಸಿಲಿಂಡರ್ ತೂಕ ಇಳಿಸುವುದರಿಂದ ಗ್ರಾಹಕರು ಪದೇ ಪದೇ ಸಿಲಿಂಡರ್ ಬುಕ್ ಮಾಡಬೇಕಾಗುತ್ತದೆ. ಅಲ್ಲದೇ ಬುಕಿಂಗ್ ಶುಲ್ಕ ಮತ್ತು ಸಾರಿಗೆ ವೆಚ್ಚವನ್ನು ಹೆಚ್ಚಿಸಬಹುದು ಎಂಬ ಆತಂಕ ಜನರಲ್ಲಿದೆ.
ಹೊಸ ತೂಕ: 10 ಕೆ.ಜಿ. (ಪ್ರಸ್ತುತ 14.2 ಕೆ.ಜಿ.)
- ಕಾರಣ: ದೇಶದಲ್ಲಿ ಎಲ್ಪಿಜಿ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರ.
- ಅಗತ್ಯ: ದಿನಕ್ಕೆ 93,500 ಟನ್ ಎಲ್ಪಿಜಿ ಬೇಕು, ಆದರೆ ಪೂರೈಕೆ ಕುಂಠಿತವಾಗಿದೆ.
- ಸವಾಲು: ಪಂಚ ರಾಜ್ಯಗಳ ಚುನಾವಣೆ ವೇಳೆ ಜಾರಿಗೆ ತಂದರೆ ಸಾರ್ವಜನಿಕರ ವಿರೋಧದ ಸಾಧ್ಯತೆ.


