Greater Bengaluru News9 : ಯುಗಾದಿ ಮತ್ತು ರಂಜಾನ್ ಹಬ್ಬಗಳಿಗಾಗಿ ಊರಿಗೆ, ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಲಿರುವುದರಿಂದ ಕೆಎಸ್‌ಆರ್‌ಟಿಸಿ 2000 ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.
ಮಾರ್ಚ್ 18ರಿಂದ 20ರವರೆಗೆ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಹಾಗೂ ಮಾ.22 ರಂದು ವಿವಿಧೆಡೆಯಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ಬಸ್‌ಗಳು ಸಂಚರಿಸಲಿವೆ. ನಿಗಮದ ಕಾರ್ಯಾಚರಣೆ ವ್ಯಾಪ್ತಿಯ ಎಲ್ಲ ತಾಲೂಕು, ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕೆ ಅನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.
www.ksrtc.karnataka.gov.in ವೆಬ್‌ಸೈಟ್ ಭೇಟಿ ನೀಡಿ ಇ-ಟಿಕೆಟ್ ಬುಕಿಂಗ್ ಅನ್ನು ಮಾಡಬಹುದಾಗಿದೆ. ಪ್ರಯಾಣಿಕರು ಕರ್ನಾಟಕ ಹಾಗೂ ಅಂತಾರಾಜ್ಯದಲ್ಲಿ ಇರುವ ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದು.
4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10 ರಿಯಾಯಿತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ, ಹೊರರಾಜ್ಯಗಳ ತಿರುಪತಿ, ವಿಜಯವಾಡ, ಹೈದರಾಬಾದ್ ಸಹಿತ ವಿವಿಧೆಡೆ ವಿಶೇಷ ಬಸ್‌ಗಳು ಸಂಚರಿಸಲಿವೆ.


