ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೊರ್ಟ್ ಇಂದು (ಜೂನ್ 05) ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವ ಹೈಕೋರ್ಟ್, ಘಟನೆಯ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮಧ್ಯಾಹ್ನ 2.30 ಕ್ಕೆ ನಿಗದಿಪಡಿಸಿದೆ. ಹೈಕೋರ್ಟ್ ಕಟ್ಟಡದ ಮೇಲೂ ಜನರು ನಿಂತಿದ್ದರು. ಇಲ್ಲಿ ಭದ್ರತಾ ಲೋಪವಾಗಿರುವುದು ಸ್ಪಷ್ಟವಾಗಿದೆ ಎಂದು ವಕೀಲರಿಂದ ಕೋರ್ಟ್ಗೆ ಮಾಹಿತಿ ಹೋಗಿದೆ. ಜನರ ಸಾವುನೋವಿನ ಬಗ್ಗೆ ಹೈಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ.
ನಡೆದಿದ್ದೇನು?
ಮಂಗಳವಾರ (ಜೂನ್ 03) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಬುಧವಾರ (ಜೂನ್ 04) ಅಹಮದಾಬಾದ್ನಿಂದ ತಮ್ಮ ತವರು ಮೈದಾನಕ್ಕೆ ಆರ್ಸಿಬಿ ತಂಡ ಹಿಂತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ಸುದ್ದಿ ಕೇಳಿ ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂಗೆ ಜಮಾಯಿಸಿದರು. ಇತ್ತ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳಲ್ಲಿ ಆರ್ಸಿಬಿ ತಂಡ ಸನ್ಮಾನ ಸ್ವೀಕರಿಸಿದರೆ, ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋರ ದುರಂತ ಸಂಭವಿಸಿತು.
ಒಂದೇ ಕಡೆ ಲಕ್ಷಾಂತರ ಮಂದಿ ಜಮಾಯಿಸಿದ್ದರು. ಅಲ್ಲದೆ, ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ಸ್ಥಳದಲ್ಲಿ ಮೆಡಿಕಲ್ ವ್ಯವಸ್ಥೆಯು ಇರಲಿಲ್ಲ. ಸುಮಾರು 2 ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು ಎನ್ನಲಾಗಿದೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಇದೊಂದು ಕರಾಳ ಘಟನೆಯಾಗಿದೆ. ಐಪಿಎಲ್ಗೆ ಇದೊಂದು ಕಪ್ಪು ಚುಕ್ಕಿ ಎಂದರೆ ತಪ್ಪಾಗಲಾರದು. ಈ ಘಟನೆಯ ಬಗ್ಗೆ ಕೇಳಿ ಸಚಿನ್, ಅನೀಲ್ ಕುಂಬ್ಳೆ ಸೇರಿದಂತೆ ಅನೇಕ ದಿಗ್ಗಜರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಸಹ ಸಂತಾಪ ಸೂಚಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಸಹ ಘೋಷಿಸಿದೆ. ಅದೇ ರೀತಿ, ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ: 11 ಸಾವಾದರೂ ದಾಖಲಾಗಿಲ್ಲ ಒಂದೇ ಒಂದು ಎಫ್ಐಆರ್!


