ಬೆಂಗಳೂರು: ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿ, ಅದಕ್ಕಾಗಿ ಕಾದು ಕುಳಿತವರ ಪೈಕಿ ಬೆಂಗಳೂರು ನಗರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು 1,71,583 ಅರ್ಜಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬಾಕಿಯಿವೆ. ಇದರಲ್ಲಿ ಅತಿ ಹೆಚ್ಚು ಸಂಖ್ಯೆ 85,844 ಅರ್ಜಿಗಳು ಬೆಂಗಳೂರು ನಗರಕ್ಕೆ ಸೇರಿದ್ದಾಗಿವೆ.
ಸಿವಿಲ್ ಅಪೀಲ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಪಾಲಿಸುವುದಕ್ಕಾಗಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಅಂಕಿ-ಅಂಶಗಳು ಚರ್ಚೆಗೆ ಬಂದಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಟ್ಟಡ ನಕ್ಷೆ ಅನುಮೋದನೆ ತಂತ್ರಾಂಶದಲ್ಲಿ ದಾಖಲಾದ ಪ್ರಕಾರ ಆರಂಭಿಕ ಪ್ರಮಾಣಪತ್ರ (ಸಿಸಿ)/ ಸ್ವಾಧೀನತಾ ಪ್ರಮಾಣಪತ್ರ (ಒಸಿ) ನೀಡಲು ಬಾಕಿಯಿರುವುದು ಕೇವಲ 28 ಅರ್ಜಿಗಳು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪಂಚತಂತ್ರ ಪೋರ್ಟಲ್‌ನಲ್ಲಿ ಕೇವಲ 44 ಅರ್ಜಿಗಳು ಗ್ರಾಮೀಣಾ ಪ್ರದೇಶದ್ದಾಗಿವೆ ಎಂದು ಸಂಬಂಧಿಸಿದ ಅಧಿಕಾರಿಳು ಮಾಹಿತಿ ನೀಡಿದರು. ಲಭ್ಯ ಗ್ರಾಮೀಣ ಮತ್ತು ನಗರ ಪ್ರದೇಶದ ಅರ್ಜಿಗಳು, ಅಧಿಕಾರಿಗಳ ನೀಡಿದ ಅಂಕಿ-ಅಂಶಗಳಿಗೆ ತಾಳೆಯಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ ಇಲಾಖೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬಾಕಿಯಿರುವ ಅರ್ಜಿಗಳ ಡೇಟಾಬೇಸ್‌ನ್ನು ಇಪಿಐ ಮೂಲಕ ಬುಧವಾರವೇ ನೀಡಬೇಕು ಎಂದು ಇಂಧನ ಇಲಾಖೆಗೆ ಶಾಲಿನಿ ರಜನೀಶ್ ಸೂಚಿಸಿದರು.
ತಂತ್ರಾಂಶಗಳ ಸಂಯೋಜನೆ
ಮೂರು ಇಲಾಖೆಗಳ ಜತೆಗೆ ಬೆಂಗಳೂರು ಜಲ ಮಂಡಳಿ ತಂತ್ರಾಂಶಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಯುಎಲ್‌ಎಂಎಸ್ ಪೋರ್ಟಲ್‌ಗೆ ಸಂಯೋಜಿಸಲು ಸಭೆ ಸೂಚಿಸಿತು.
ಇಂಧನ ಇಲಾಖೆ ನೀಡಿರುವ ಮಾಹಿತಿಯಂತೆ ಉಳಿದ ಇಲಾಖೆಗಳು ಸಂಬಂಧಿಸಿದ ಅರ್ಜಿದಾರರಿಂದ ಆನ್‌ಲೈನ್ ಪೋರ್ಟಲ್‌ನಲ್ಲಿ ಕಟ್ಟಡ ನಕ್ಷೆಯೊಂದಿಗೆ ಮುಂದಿನ 15 ದಿನಗಳಲ್ಲಿ ಸಂಗ್ರಹಿಸಬೇಕು. ಕಟ್ಟಡ ನಕ್ಷೆ ಅನುಮೋದನೆ ಕುರಿತು ಅಧಿನಿಯಮ, ನಿಯಮಗಳು, ‘ನಂಬಿಕೆ ನಕ್ಷೆ’ ಬಗ್ಗೆ ಜನರಿಗೆ ಮಾಹಿತಿ ನೀಡಲು ತಿಳಿಸಲಾಯಿತು.
‘ಎ’ ಖಾತಾ ಹೊಂದಿರುವ ಅರ್ಜಿದಾರರಿಗೆ ತಕ್ಷಣ ಒಸಿ/ಸಿಸಿಗಳನ್ನು ಒದಗಿಸಬೇಕು. ಬಿ ಖಾತಾ ಹೊಂದಿರುವ ಅರ್ಜಿದಾರರಿಗೆ ಪ್ರತ್ಯೇಕವಾಗಿ ಸಂಗ್ರಹಿಸಿ ಕ್ರೋಡೀಕರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನಿರ್ದೇಶಿಸಿದರು.
ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ಬೇಕಾದ್ರೆ ಗ್ರಾಮಗಳಲ್ಲಿನ ಮನೆಗೂ ಬೇಕು ಒಸಿ, ಸಿಸಿ


