Greater Bengaluru News9: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ಹಲವಾರು ಪ್ರಶ್ನೆಗಳನ್ನು ಹುಟ್ಟಿಸಿದೆ. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ರಾಯ್ ಅವರ ಡೈರಿ (ದಿನಚರಿ ಪುಸ್ತಕ) ಈಗ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಪ್ರಮುಖ ದಾಖಲೆಗಳಾಗಿ ಪರಿಣಮಿಸಿದೆ. ಡೈರಿಯಲ್ಲಿ ಅವರು ಪ್ರಭಾವಿ ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರ ಹೆಸರುಗಳನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಸಿಜೆ ರಾಯ್ ಪ್ರತಿದಿನವೂ ಡೈರಿ ಬರೆಯುವ ಅಭ್ಯಾಸವಿದ್ದರು. ಅದರಲ್ಲಿರುವ ಮಾಹಿತಿಯ ಪ್ರಕಾರ, ರಾಜ್ಯದ ಎರಡು ಪ್ರಭಾವಿ ಶಾಸಕರು ಮತ್ತು ಒಬ್ಬ ಮಾಜಿ ಸಂಸದ ಅವರ ಹೆಸರುಗಳ ಉಲ್ಲೇಖವಿದೆ. ವಿಶೇಷವಾಗಿ, ಬೆಂಗಳೂರಿನ ಮತ್ತು ಕೋಲಾರ ಜಿಲ್ಲೆಯ ಶಾಸಕರ ಜೊತೆ ಅವರ ವ್ಯವಹಾರಿಕ ಸಂಪರ್ಕಗಳ ಕುರಿತು ಮಾಹಿತಿ ಸೇರಿಸಲಾಗಿದೆ.
ಅಷ್ಟೇ ಅಲ್ಲದೆ, ಡೈರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟರು ಮತ್ತು ಮಾಡೆಲ್‌ಗಳು ಸೇರಿದಂತೆ, ದುಬೈನಲ್ಲಿ ನಡೆಸುತ್ತಿದ್ದ ವ್ಯವಹಾರಗಳು ಮತ್ತು ಅಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕಗಳ ವಿವರಗಳು ದಾಖಲಾಗಿವೆ.
ಲೇಖಕ ಚಂದ್ರಚೂಡ್ ಅವರು ವಿಡಿಯೋ ಮೂಲಕ ಈ ಮಾಹಿತಿಯನ್ನು ಬಹಿರಂಗಪಡಿಸಿ, “ಸಿಜೆ ರಾಯ್ ಶೂಟೌಟ್ ಪರಿಸ್ಥಿತಿಯಲ್ಲಿದ್ದರೇ? ದೇಶ ತೊರೆಯಬೇಕಾದ ಅನಿವಾರ್ಯತೆ ಎದುರಿಸಬೇಕಾಯಿತೇ? ದೊಡ್ಡಬಳ್ಳಾಪುರದ ರೆಸಾರ್ಟ್ ನಲ್ಲಿ ನಡೆದ ಘಟನೆಗಳು ಮತ್ತು ಖ್ಯಾತ ನಟಿಯೊಡನೆ ಸಂಬಂಧದ ವಿಚಾರ ತನಿಖೆಗೆ ಒಳಪಡಬೇಕು. ಕಂಪನಿಯಲ್ಲಿ ನಡೆಯಬಹುದಾದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳ ಬಗ್ಗೆ ಪೊಲೀಸರ ತನಿಖೆ ಅಗತ್ಯ” ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ, ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಅಶೋಕನಗರ ಪೊಲೀಸ್ ಠಾಣೆ ತನಿಖೆ ಚುರುಕಾಗಿ ಸಾಗುತ್ತಿದೆ. ಡಿಜಿ ಮತ್ತು ಐಜಿಪಿ ಸಲೀಂ ಅವರು ಕಮಿಷನರ್ರಿಂದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.


