ಬೆಂಗಳೂರು: ಸೂರ್ಯಘರ್ ಯೋಜನೆಯ ಬಗ್ಗೆ ಬಹುಶಃ ಎಲ್ಲರಿಗೂ ಗೊತ್ತಿದೆ. ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಕಟಿಸಿತ್ತು. ಪ್ರತಿಯೊಂದು ಮನೆಯನ್ನು ವಿದ್ಯುತ್ ಸ್ವಾವಲಂಬಿಯನ್ನಾಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಿದು.
ಈ ಯೋಜನೆಯಡಿ ಪ್ರತಿ ಮನೆಯ ಮೇಲೆ ವಿದ್ಯುತ್ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ ಆ ಮನೆಗೆ ಬೇಕಾದ ವಿದ್ಯುತ್ತನ್ನು ಸ್ವಯಂ ಆಗಿ ಉತ್ಪಾದಿಸಬಹುದು. ಇದಕ್ಕೆ ತಗಲುವ ಖರ್ಚಿನ ಮೇಲೆ ಸಬ್ಸಿಡಿ ಕೊಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬೆಸ್ಕಾಂ ವತಿಯಿಂದ ಸಬ್ಸಿಡಿಯನ್ನು ಘೋಷಿಸಿದೆ.
ಸಬ್ಸಿಡಿ ಘೋಷಣೆಯ ಅಡಿಯಲ್ಲಿ ಸೂರ್ಯಘರ್ ಗ್ರಾಹಕರನ್ನು, ವಸತಿ ಗ್ರಾಹಕರು ಹಾಗೂ ವಾಣಿಜ್ಯ ಸಂಕೀರ್ಣ ಅಥವಾ ಅಪಾರ್ಟ್ ಮೆಂಟ್ ಗ್ರಾಹಕರು ಎಂದು ವಿಂಗಡಿಸಲಾಗಿದೆ. ವಸತಿ ಗ್ರಾಹಕರಿಗೆ 1 ಕಿ.ವ್ಯಾ. ವರೆಗಿನ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ತಗಲುವ ಖರ್ಚಿಗೆ 30 ಸಾವಿರ ರೂ.ಗಳನ್ನು ಸಬ್ಸಿಡಿ ಘೋಷಿಸಲಾಗಿದೆ.
ಸಬ್ಸಿಡಿ ಎಷ್ಟೆಷ್ಟು?
ಹಾಗೆಯೇ, 2 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡವರಿಗೆ ತಗಲುವ ವೆಚ್ಚಕ್ಕೆ 60 ಸಾವಿರ ರೂ. ಮತ್ತು 3 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳುವವರೆಗೆ 78 ಸಾವಿರ ರೂ. ಸಬ್ಸಿಡಿ ಘೋಷಿಸಲಾಗಿದೆ.
ಯಾವ ಕಿಲೋವ್ಯಾಟ್ ಪ್ಯಾನೆಲ್ ನಿಂದ ಎಷ್ಟು ಉತ್ಪಾದನೆ?
1 ಕಿಲೋ ವ್ಯಾಟ್ ಪ್ಯಾನೆಲ್ ನಿಂದ ಪ್ರತಿ ತಿಂಗಳು 100 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. 2 ಕಿಲೋವ್ಯಾಟ್ ಪ್ಯಾನೆಲ್ ನಿಂದ 101ರಿಂದ 200 ಯೂನಿಟ್ ಸಿಗುತ್ತದೆ ಹಾಗೂ 3 ಕಿಲೋ ವ್ಯಾಟ್ ಪ್ಯಾನೆಲ್ ನಿಂದ 201ರಿಂದ 300 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
1 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಹಾಕಿಸಲು 60 ಸಾವಿರ ರೂ.ಗಳಷ್ಟು ಹಣ ಖರ್ಚಾಗುತ್ತದೆ. ಇದರಲ್ಲಿ 30 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು, 2 ಕಿ.ವ್ಯಾಟ್ ಸೋಲಾರ್ ಪ್ಯಾನೆಲ್ ಹಾಕಿಸಲು 1. 20 ಲಕ್ಷ ರೂ.ಗಳಿಂದ 1. 60 ಲಕ್ಷ ರೂ.ಗಳವರೆಗೆ ಖರ್ಚಾಗಲಿದ್ದು, ಸರ್ಕಾರದಿಂದ 60 ಸಾವಿರ ರೂ. ಸಬ್ಸಿಡಿ ಸಿಗುತ್ತದೆ. ಇನ್ನು, 3 ಕಿ. ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಗಳನ್ನು ಹಾಕಿಸಲು 1.80 ಲಕ್ಷ ದಿಂದ 2.40 ಲಕ್ಷ ರೂ. ಖರ್ಚಾಗಲಿದ್ದು, ಸರ್ಕಾರದಿಂದ 78 ಸಾವಿರ ರೂ. ಸಬ್ಸಿಡಿ ಸಿಗುತ್ತದೆ.
ಉಳಿತಾಯದ ಲೆಕ್ಕ: ಸೂರ್ಯಘರ್ ಯೋಜನೆಯಡಿ ಸೋಲಾರ್ ಪ್ಯಾನೆಲ್ ಗಳನ್ನು ಹಾಕಿಸಿಕೊಂಡ ನಂತರ ವರ್ಷದ ವಿದ್ಯುತ್ ಬಿಲ್ ನಲ್ಲಿ ಆಗುವ ಉಳಿತಾಯದ ಲೆಕ್ಕಾಚಾರವನ್ನೂ ಸಹ ಬೆಸ್ಕಾಂ ವಿವರಿಸಿದೆ. ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿಕೊಂಡಾಗ ವಾರ್ಷಿಕ ವಿದ್ಯುತ್ ಬಿಲ್ ನಲ್ಲಿ ಸಾವಿರಾರು ರೂ.ಗಳ ಉಳಿತಾಯವಾಗಲಿದೆ. ಇನ್ನು 2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಗಳನ್ನು ಹಾಕಿಸಿಕೊಂಡಾಗ ವಾರ್ಷಿಕವಾಗಿ 9,600 ರೂ. ಉಳಿತಾಯವಾಗುತ್ತದೆ. 2 ಕಿಲೋ ವ್ಯಾಟ್ ಸಾಮರ್ಥ್ಯದ ಪ್ಯಾನೆಲ್ ಗಳನ್ನು ಹಾಕಿಸಿಕೊಂಡಾಗ 21,600 ರೂ.ಗಳ ಉಳಿತಾಯವಾಗುತ್ತದೆ. ಇನ್ನು, 3 ಕಿಲೋ ವ್ಯಾಟ್ ಸಾಮರ್ಥ್ಯದ ಪ್ಯಾನೆಲ್ ಗಳನ್ನು ಹಾಕಿಸಿಕೊಂಡಾಗ 36,000 ರೂ.ಗಳ ಉಳಿತಾಯವಾಗುತ್ತದೆ ಎಂದು ಬೆಸ್ಕಾಂ ಹೇಳಿದೆ.
ಬ್ಯಾಂಕುಗಳಿಂದ ಸಾಲ ಸಿಗುತ್ತಾ, ಬಡ್ಡಿ ಹೇಗೆ?
ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು ತಗಲುವ ಖರ್ಚಿಗಾಗಿ ಬ್ಯಾಂಕುಗಳಿಂದ ಸಾಲ ಪಡೆಯಬಹುದಾಗಿದೆ. ಜನ ಸಮರ್ಥ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದರೆ ಮಾತ್ರ ಈ ಯೋಜನೆಗೆ ಸಾಲ ಸಿಗುತ್ತದೆ. ಈ ಯೋಜನೆಯ ಮೇಲೆ ನೀಡಲಾಗುವ ಸಾಲಕ್ಕೆ ವಾರ್ಷಿಕ ಶೇ. 7ರಷ್ಟು ಬಡ್ಡಿ ಇರಲಿದೆ. ನಿಮ್ಮ ವಿದ್ಯುತ್ ಬಿಲ್ ನಲ್ಲಿ ಆಗುವ ಉಳಿದಾಯದ ಹಣವನ್ನೇ ಬ್ಯಾಂಕ್ ಸಾಲದ ಕಂತುಗಳನ್ನಾಗಿ ಕಟ್ಟಬಹುದು.
ಮೇಲ್ಫಾವಣಿ ಮೇಲೆ ಜಾಗ ಎಷ್ಟು ಬೇಕು?
ಇಷ್ಟಾದ ಮೇಲೆ ಸೌರ ಫಲಕಗಳನ್ನು ಹಾಕಿಸಲು ಮನೆಯ ಮೇಲ್ಛಾವಣೆ ಮೇಲೆ ಎಷ್ಟು ವಿಶಾಲವಾದ ಜಾಗವಿರಬೇಕು ಎಂಬುದರ ಲೆಕ್ಕಾಚಾರವನ್ನೂ ಬೆಸ್ಕಾಂ ಕೊಟ್ಟಿದೆ. 1 ಕಿಲೋ ವ್ಯಾಟ್ ಸಾಮರ್ಥ್ಯದ ಪ್ಯಾನೆಲ್ ಗಳನ್ನು ಅಳವಡಿಸಲು 10 x 10 ಚದರಡಿ ಜಾಗ ಬೇಕಿರುತ್ತದೆ. 2 ಕಿಲೋ ವ್ಯಾಟ್ ಹಾಗೂ 3 ಕಿಲೋ ವ್ಯಾಟ್ ಪ್ಯಾನೆಲ್ ಗಳಿಗೆ ಬಹುಶಃ ಇದಕ್ಕಿಂತ ಇನ್ನೂ ಸ್ವಲ್ಪ ಹೆಚ್ಚು ಜಾಗ ಬೇಕಾಗಬಹುದು.
ಪಂಪ್‌ಸೆಟ್ ಟಿ.ಸಿ. ನೀಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಬೆಸ್ಕಾಂ ಶಾಖಾಧಿಕಾರಿ ಅಮಾನತು


