BBMP
Loading ...

BBMP News

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಅನ್ನು ಈ ತಿಂಗಳ 15ರಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ತರಲು ಸರ್ಕಾರ ಮುಂದಾಗಿದ್ದು, ಆ ದಿನದಿಂದಲೇ ಹೊಸ ವ್ಯವಸ್ಥೆಯನ್ನು ನಿರ್ವಹಿಸಲು ಆಡಳಿತಾಧಿಕಾರಿ ನೇಮಕಗೊಳ್ಳಲಿದ್ದಾರೆ. ಹಾಲಿ ಬಿಬಿಎಂಪಿ ಆಡಳಿತಾಧಿಕಾರಿಯೇ ನೂತನ ವ್ಯವಸ್ಥೆಯ ಆಡಳಿತ ಮುಖ್ಯಸ್ಥರಾಗಲಿದ್ದಾರೆ. ಈ ಮೂಲಕ ಹೊಸ ವ್ಯವಸ್ಥೆಯು ನೇರವಾಗಿ ಸರ್ಕಾರದ ಕಣ್ಗಾವಲಿನಲ್ಲಿ ಆಡಳಿತ ನಡೆಯಲಿದೆ.

ಸದ್ಯ ಬಿಬಿಎಂಪಿಯ ಮುಖ್ಯ ಆಯುಕ್ತರು ಪಾಲಿಕೆ ದೈನಂದಿನ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ. ಜಿಬಿಜಿಎ ಅಸ್ತಿತ್ವಕ್ಕೆ ಬಂದಲ್ಲಿ ಇದರ ಸದಸ್ಯ ಕಾರ್ಯದರ್ಶಿ ಆಗಿ ಮುಂದುವರಿಯಲಿದ್ದಾರೆ. ಆಡಳಿತ ದೃಷ್ಟಿಯಿಂದ ಹಾಲಿ ಬಿಬಿಎಂಪಿ ಏರಿಯಾವನ್ನೇ ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ವ್ಯಾಪ್ತಿಯಲ್ಲಿ ಆಸ್ತಿತ್ವಕ್ಕೆ ಬರಲಿದೆ. ಇದು ಹೊಸ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವವರೆಗೂ ಹಾಲಿ ಪಾಲಿಕೆ ಪ್ರದೇಶ ವ್ಯಾಪ್ತಿಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಜಿಬಿಜಿಎ ಕಾಯ್ದೆ ಅನ್ವಯ ಹೊಸ ಪಾಲಿಕೆಗಳ ರಚನೆ, ನಿಯಮ, ಉಪಬಂಧಗಳ ಸಹಿತ ಇತರ ಕಾರ್ಯಚಟುವಟಿಕೆಗೆ ಅವಕಾಶ ಕಲ್ಪಿಸಲಿದೆ. ಈ ನಿಯಮಗಳನ್ನು ಆಧರಿಸಿ ಆಡಳಿತಾಧಿಕಾರಿಯು ಸರ್ಕಾರದ ಮಾರ್ಗದರ್ಶನದಲ್ಲಿ ಹೊಸ ಸಮಿತಿ ಸಮಿತಿ ನೂತನ ಪಾಲಿಕೆಗಳ ರಚಿಸಲು ಶೀಘ್ರವೇ ಪ್ರತ್ಯೇಕವಾದ ಮಾರ್ಗಸೂಚಿ ಹೊರಡಿಸಲಿದ್ದಾರೆ.

ಮೊದಲ ಹಂತದಲ್ಲಿ ಜಿಬಿಎಗೆ ಮಣೆ:
ಜಿಬಿಜಿಎ ವ್ಯಾಪ್ತಿಯೊಳಗೆ ಗರಿಷ್ಠ 7 ಹೊಸ ಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿ 709 ಚದರ ಕಿ.ಮೀ. ಇದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳು ಅಭಿವೃದ್ಧಿ ಆಗಿರುವುದರಿಂದ ಆ ಪ್ರದೇಶವೂ ಗ್ರೇಟರ್ ಬೆಂಗಳೂರಿಗೆ ಸೇರ್ಪಡೆಗೊಳ್ಳಲಿವೆ. ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಯಾವ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಇನ್ನಷ್ಟೇ ಅಧಿಸೂಚನೆ ಮೂಲಕ ಅಂತಿಮಗೊಳ್ಳಲಿದೆ. ಆದರೆ, ಆಡಳಿತ ದೃಷ್ಟಿಯಿಂದ ರಚನೆಯಾಗಲಿರುವ ಹೊಸ ಪಾಲಿಕೆಗಳ ವ್ಯಾಪ್ತಿ ಹಿಂದಿನ ಬಿಬಿಎಂಪಿ ಮಿತಿಯಲ್ಲೇ ಇರಲಿದೆ. ನಂತರದಲ್ಲಿ ಸಂದರ್ಭಕ್ಕೆ ಅನುಸಾರವಾಗಿ ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಇಂಗಿತ ವ್ಯಕ್ತಪಡಿಸಿದೆ.

ಪಂಚ ಪಾಲಿಕೆಗಳ ರಚನೆಗೆ ಒಲವು?:
ಕಾಯ್ದೆ ಅನ್ವಯ ಹಾಲಿ ಬಿಬಿಎಂಪಿಯನ್ನು 3 ಅಥವಾ 5 ಭಾಗವಾಗಿ ವಿಂಗಡಿಸುವ ಸಾಧ್ಯತೆ ಇದೆ. (ಹೊಸ ಪ್ರದೇಶ ಸೇರ್ಪಡೆಗೂ ಅವಕಾಶ ಇದೆ). ಬಿಬಿಎಂಪಿಯನ್ನು ಮೂರು ಪಾಲಿಕೆಯಾಗಿ ವಿಂಗಡಿಸಿದರೆ ಕೋರ್ ಪ್ರದೇಶ ಒಳಗೊಂಡ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯವನ್ನು ಒಂದು ಕಾರ್ಪೊರೇಷನ್ ಆಗಿ ರಚಿಸಬಹುದು. ಉಳಿದೆರಡು ಕೋರ್ ಪ್ರದೇಶಕ್ಕೆ ಹೊಂದಿಕೊಂಡಂತೆ ಉತ್ತರ-ಪೂರ್ವ-ದಕ್ಷಿಣ ಹಾಗೂ ಉತ್ತರ-ಪಶ್ಚಿಮ-ದಕ್ಷಿಣ ಪ್ರದೇಶಗಳನ್ನು ಸೇರಿಸಿ ಕ್ರಮವಾಗಿ ಪೂರ್ವ ಪಾಲಿಕೆ ಮತ್ತು ಪಶ್ಚಿಮ ಪಾಲಿಕೆ ರಚಿಸಿಕೊಳ್ಳಬಹುದಾಗಿದೆ. ಆದರೆ, ಪೂರ್ವ ಹಾಗೂ ಪಶ್ಚಿಮ ಪಾಲಿಕೆಗಳ ವ್ಯಾಪ್ತಿ ಹಾಗೂ ಗಡಿ ತುಂಬಾ ವಿಸ್ತಾರವಾಗುವುದರಿಂದ ಆಡಳಿತ ದೃಷ್ಟಿಯಿಂದ ಕಷ್ಟವಾಗುವ ಸಾಧ್ಯತೆ ಇದೆ. ಜತೆಗೆ ಆದಾಯ ಸಂಪನ್ಮೂಲವನ್ನು ಸಮನಾಗಿ ಹಂಚಿಕೆ ಮಾಡಲು ತುಸು ಕಷ್ಟವಾಗಲಿದೆ ಎಂಬ ಮಾತು ಕೇಳಿಬಂದಿದೆ.

ಈ ಕಾರಣದಿಂದಾಗಿ ಐದು ಪಾಲಿಕೆಗಳನ್ನಾಗಿ ವಿಂಗಡಿಸಿದರೆ ಆಡಳಿತ ನಡೆಸುವುದು ಸುಲಭ. ಸಮಾನ ಪ್ರದೇಶ, ಜನಸಂಖ್ಯೆ, ಆದಾಯ ಮೂಲ ಹಾಗೂ ಅಧಿಕಾರ ಚಲಾವಣೆ ಸುಲಭವಾಗಲಿದೆ. ಗಡಿ ಸಮಸ್ಯೆ ಎದುರಾಗುವುದು ಕಡಿಮೆ. ಮುಖ್ಯವಾಗಿ ನಗರ ವ್ಯಾಪ್ತಿಯಲ್ಲಿರುವ ಯಾವುದೇ ವಿಧಾನಸಭಾ ಕ್ಷೇತ್ರ ಒಂದಕ್ಕಿಂತ ಹೆಚ್ಚಿನ ಪಾಲಿಕೆಗೆ ಸೇರ್ಪಡೆ ಮಾಡಬಾರದು ಎಂಬುದು ಎಲ್ಲ ಪಕ್ಷಗಳ ಶಾಸಕರ ಆಗ್ರಹವಾಗಿದೆ. 2-3 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದವುಗಳನ್ನು ಒಂದೇ ಪಾಲಿಕೆಗೆ ಸೇರಿಸಲು ಕಷ್ಟವಾಗಲಾರದು. ಆದಾಯ ಸಂಪನ್ಮೂಲಕ್ಕೆ ಹೆಚ್ಚಿನ ತಗಾದೆ ಎದುರಾಗದು. ಹಾಗಾಗಿ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ಹಾಗೂ ಕೇಂದ್ರ ಪಾಲಿಕೆ ರಚಿಸುವುದು ಸೂಕ್ತ ಎಂಬುದು ನಗರ ಯೋಜನಾ ತಜ್ಞರ ಅಭಿಪ್ರಾಯವಾಗಿದೆ.

ಎಲ್ಲ ಪಾಲಿಕೆಗಳಿಗೂ ‘ಬೆಂಗಳೂರು ಬ್ರ್ಯಾಂಡ್’ ಬಲ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜಧಾನಿ ಅಭಿವೃದ್ಧಿಯನ್ನು ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ಕೈಗೊಳ್ಳುತ್ತಿದೆ. ಇದು ಹಾಲಿ ಬಿಬಿಎಂಪಿ ಸುತ್ತಲಿನ ಪ್ರದೇಶಗಳನ್ನೂ ಬೆಂಗಳೂರು ನಗರವೆಂದೇ ಗುರುತಿಸಬೇಕೆಂಬ ಇಂಗಿತ ವ್ಯಕ್ತವಾಗಿದೆ. ಈ ಕಾರಣದಿಂದ ಹೊಸದಾಗಿ ರಚನೆಯಾಗುವ ಎಲ್ಲ ಪಾಲಿಕೆಗಳೂ ಬೆಂಗಳೂರು ನಾಮಬಲ ಇರಲಿದೆ. ಇದಕ್ಕೆ ಜಿಬಿಜಿಎ ಕಾಯ್ದೆಯಲ್ಲೇ ಅವಕಾಶ ಮಾಡಿಕೊಡಲಾಗಿದೆ.

ಹೊಸ ವ್ಯವಸ್ಥೆಗೆ 4 ತಿಂಗಳ ಅಗತ್ಯ:
ಜಿಬಿಜಿಎ ಕಾಯ್ದೆ ಜಾರಿಗೆ ಬರುವ ದಿನದಿಂದ ಹೊಸ ವ್ಯವಸ್ಥೆ ಪೂರ್ಣವಾಗಿ ರೂಪುಗೊಳ್ಳಲು 4 ತಿಂಗಳ ಕಾಲಾವಕಾಶ ಇದೆ. ಈ ಗಡುವಿನೊಳಗೆ ಹೊಸ ಆಡಳಿತ ವ್ಯವಸ್ಥೆ ಸಿದ್ಧಗೊಂಡು ಚುನಾವಣೆಗೆ ವೇದಿಕೆ ಸಿದ್ಧಪಡಿಸಬೇಕಿದೆ. ಅಷ್ಟರೊಳಗೆ ಪೂರಕ ವಾತಾವರಣ ಮೂಡಿಸುವುದು ಸರ್ಕಾರಕ್ಕೆ ಸವಾಲಾಗಲಿದೆ.

3 ಹಂತದ ಆಡಳಿತ ವ್ಯವಸ್ಥೆ:
ಹೊಸದಾಗಿ ರಚನೆಯಾಗಲಿರುವ ಗ್ರೇಟರ್ ಬೆಂಗಳೂರು ಪರಿಕಲ್ಪನೆ 3 ಹಂತದ ಆಡಳಿತ ವ್ಯವಸ್ಥೆಯನ್ನು ಒಳಗೊಳ್ಳಲಿದೆ. ಮೊದಲ ಹಂತದಲ್ಲಿ ಜಿಬಿಜಿಎ ಅಡಿಯಲ್ಲಿ ನಗರಕ್ಕೆ ಸಂಬಂಧಿಸಿದ ಎಲ್ಲ ಸರ್ಕಾರಿ ಸಂಸ್ಥೆ/ಏಜೆನ್ಸಿಗಳು ಒಟ್ಟುಗೂಡಲಿವೆ. ಎರಡನೇ ಹಂತದಲ್ಲಿ 3/5 ಹೊಸ ಪಾಲಿಕೆಗಳು ರಚನೆಗೊಂಡು ಕಾರ್ಯನಿರ್ವಹಿಸಲಿವೆ. ಮೂರನೇ ಹಂತದಲ್ಲಿ ಪ್ರತೀ ಪಾಲಿಕೆಗಳಲ್ಲಿ ವಾರ್ಡ್ ಮಟ್ಟದ ಸಮಿತಿ ರಚನೆಗೊಂಡು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ.

ವರ್ಷಾಂತ್ಯದೊಳಗೆ ಚುನಾವಣೆ:
ಗ್ರೇಟರ್ ಬೆಂಗಳೂರು ಕಾಯ್ದೆ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆ ಹೊಸ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲು ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಅಗತ್ಯವಿರುವ ನಿಯಮ, ಮಾರ್ಗಸೂಚಿ ನಂತರದ ದಿನಗಳಲ್ಲಿ ಹೊರಬಿದ್ದು, ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಎಲ್ಲವೂ ನಿಗದಿತ ಸಮಯದೊಳಗೆ ನಡೆದಲ್ಲಿ ಮುಂಬರುವ ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಇಲ್ಲವೇ ಈ ವರ್ಷಾಂತ್ಯದೊಳಗೆ ಎಲೆಕ್ಟನ್ ನಡೆಸಿ ಹಾಲಿ ಬಿಬಿಎಂಪಿ ಅವಧಿ 5 ವರ್ಷ ಚುನಾವಣೆ ಇಲ್ಲದೆ ತೆರೆಮರೆಗೆ ಸಂದ ಅಪವಾದದಿಂದ ಪಾರಾಗಲು ಸರ್ಕಾರ ಆಲೋಚನೆ ನಡೆಸಿದೆ.

ಮುಂದಿನ 5 ತಿಂಗಳಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮಾತ್ರವಲ್ಲ ಮೆಟ್ರೋ ಕಾರ್ಡ್‌ಗಳನ್ನೂ ತೋರಿಸಿ ಬಿಎಂಟಿಸಿಯಲ್ಲಿ ಸಂಚರಿಸಬಹುದು

Leave a Reply

Your email address will not be published. Required fields are marked *