ಬೆಂಗಳೂರು: ನಾನು, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವವರೆಗೂ ರಾಜ್ಯದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಸರಣ ನಿಗಮ ನೌಕರರ ಸಂಘದ 60ನೇ ವಜ್ರ ಮಹೋತ್ಸವ ಸಂಭ್ರಮ ಹಾಗೂ ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಇಂಧನ ಸಚಿವನಾದ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲೂ ಖಾಸಗಿಯವರಿಗೆ ನೀಡಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದಿದ್ದಾರೆ.
ಆಗ ನಾನು ನಮ್ಮ ನೌಕರರು, ಇಂಜಿನಿಯರ್‌ಗಳು, ವ್ಯವಸ್ಥಾಪಕ ಮಂಡಳಿಯವರು ಬಹಳ ಶಕ್ತಿಶಾಲಿಯಾಗಿದ್ದು, ಎಸ್ಕಾಂಗಳನ್ನು (Eskom) ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದೆ. ರಾಜ್ಯದಲ್ಲಿ ಈ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಇರುವವರೆಗೂ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ, 19ರಿಂದ 20% ಟ್ರಾನ್ಸ್ಮಿಷನ್ ನಷ್ಟ ಆಗುತ್ತಿತ್ತು. ನಾವು ಅದನ್ನು 10%ಗೆ ಇಳಿಸಿದ್ದೇವೆ. ಇದು ದೇಶಕ್ಕೆ ಮಾದರಿ. ಬೇರೆ ರಾಜ್ಯಗಳಲ್ಲಿ ಇಂದಿಗೂ 17ರಿಂದ 18% ನಷ್ಟವಾಗುತ್ತಿದೆ. ನಿಮ್ಮೆಲ್ಲರ ಶ್ರಮದಿಂದ ಇಂದು ಈ ಇಂಧನ ಇಲಾಖೆ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಜಾರ್ಜ್ ಅವರು ಈ ಇಲಾಖೆಯ ಜವಾಬ್ದಾರಿ ತೆಗೆದುಕೊಂಡು ಪಾರದರ್ಶಕವಾಗಿ ಬಹಳ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ನಾವು ಈ ಹಿಂದೆ ಅನೇಕ ಕ್ರಾಂತಿಕಾರಕ ತೀರ್ಮಾನ ಮಾಡಿದ್ದೆವು ಎಂದು ವಿವರಿಸಿದ್ದಾರೆ.
ದೀಪ ಜಗತ್ತನ್ನೇ ಬೆಳಗುತ್ತದೆ. ಈ ದೀಪಕ್ಕೆ ಬೆಳಕು ಪೂರೈಸುತ್ತಿರುವವರು ನೀವು. ದೀಪದ ಬೆಳಕು ಎಲ್ಲರಿಗೂ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ಎಣ್ಣೆ ಹಾಗೂ ಬತ್ತಿ ಯಾರಿಗೂ ಕಾಣುವುದಿಲ್ಲ. ಅದೇ ರೀತಿ ಇಂಧನ ಇಲಾಖೆ ನೌಕರರ ಶ್ರಮದಿಂದ ಇಡೀ ಸಮಾಜಕ್ಕೆ ಬೆಳಕು ನೀಡಲಾಗುತ್ತಿದೆ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬಂದಾಗಿನಿಂದ ನೀವು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದೀರಿ ಎಂದಿದ್ದಾರೆ.
ಪ್ರೀತಿ ವಿಶ್ವಾಸ ಎಂಬುದು ಮರದಲ್ಲೂ ಸಿಗುವುದಿಲ್ಲ, ಮಾರುಕಟ್ಟೆಯಲ್ಲೂ ಸಿಗುವುದಿಲ್ಲ. ಕೇವಲ ಜನರ ಹೃದಯದಲ್ಲಿ ಮಾತ್ರ ಸಿಗುತ್ತದೆ. ನಾವು ನಿಮಗಾಗಿ ಮಾಡಿದ ಸೇವೆ, ತೀರ್ಮಾನವನ್ನು ನೀವು ಸ್ಮರಿಸಿ, ನಮ್ಮ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಸರ್ಕಾರದ ಪರವಾಗಿ ನಮಿಸುತ್ತೇನೆ. ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರದಲ್ಲಿ ನಾನು ನಾಲ್ಕೂವರೆ ವರ್ಷ ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೆ. ನಾನು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ, ಇದರ ಜವಾಬ್ದಾರಿ ಹೊತ್ತವರೆಲ್ಲರೂ ವಿಫಲರಾಗಿದ್ದಾರೆ. ನೀವು ಯಾಕೆ ಇದರ ಜವಾಬ್ದಾರಿ ವಹಿಸಿಕೊಂಡಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ ಎಂದು ಹೇಳಿದ್ದೆ. ಕಷ್ಟದ ಜವಾಬ್ದಾರಿ ವಹಿಸಿಕೊಂಡು ಅದನ್ನು ಸರಿಪಡಿಸುವುದೇ ನಾಯಕನ ಗುಣ ಎಂದು ಹೇಳಿದ್ದಾರೆ.
ಬೆಂಗಳೂರಿಗರ ಮನೆ ಬಾಗಿಲಿಗೇ ಇ- ಖಾತಾ ವಿತರಣೆ: ಜುಲೈ 1ರಿಂದ ಆಂದೋಲನ ಆರಂಭ ಎಂದ ಡಿಸಿಎಂ ಡಿಕೆಶಿ


