Greater Bengaluru News9 : ಗೆಳೆಯನ ಮನೆಗೆ ನಕಲಿ ಪೊಲೀಸರನ್ನು ಕಳುಹಿಸಿ ಕಳ್ಳತನ ಮಾಡಿಸಿದ ಆರೋಪದ ಮೇಲೆ ಸ್ಟ್ಯಾಂಪ್ ವೆಂಡರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ (52) ಬಂಧಿತ ಆರೋಪಿ. ಬಿಇಎಲ್ ಲೇಔಟ್‌ನಲ್ಲಿರುವ ಹೊಂಬಾಳೇಗೌಡ ಎಂಬ ಉದ್ಯಮಿ ಮನೆಗೆ ಫೆ. 16ರಂದು ಮಧ್ಯಾಹ್ನ ಪೊಲೀಸರ ಸೋಗಿನಲ್ಲಿ ಆರೋಪಿಗಳು ನುಗ್ಗಿ, ಗನ್ ಮತ್ತು ಚಾಕು ತೋರಿಸಿ ಬೆದರಿಸಿದ್ದರು. ಬಳಿಕ ಹೊಂಬಾಳೇಗೌಡ ದಂಪತಿಯ ಕೈಕಾಲುಗಳನ್ನು ಟೇಪ್‌ನಿಂದ ಕಟ್ಟಿಹಾಕಿ, ಬಾಯಿಗೆ ಪ್ಲಾಸ್ಟರ್ ಹಚ್ಚಿ, ಬೆಡ್ ರೂಮ್‌ನಲ್ಲಿದ್ದ ಬೀರುಗಳಿಂದ 20 ಲಕ್ಷ ನಗದು ಮತ್ತು ಅರ್ಧ ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ದೋಚಿದ್ದರು.
ದರೋಡೆಕೋರರು ದಂಪತಿಯ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಪೊಲೀಸರು ನಾಗೇಂದ್ರ ಹಾಗೂ ಬಚ್ಚನ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಆದರೆ ತನಿಖೆ ಮುಂದುವರೆದಾಗ ಅಸಲಿ ಸತ್ಯ ಬಯಲಾಗಿದ್ದು ಹೊಂಬಾಳೇಗೌಡ ಅವರ ಆಪ್ತ ಸ್ನೇಹಿತ ಬೆಟ್ಟೇಗೌಡನ ಸಂಚು ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆ ಮಾಲೀಕ ಹೊಂಬಾಳೇಗೌಡ ಅವರು ಸೈಟ್ ಮಾರುವ ವಿಚಾರವಾಗಿ ಬೆಟ್ಟೇಗೌಡನ ಬಳಿ ಸ್ಟ್ಯಾಂಪ್ ಪೇಪರ್ ಮಾಡಿಸಿದ್ದರು. ಹೀಗಾಗಿ ಸ್ನೇಹಿತನ ಬಳಿ ಸೈಟ್ ಮಾರಿದ ಹಣ ಇದೆ ಎಂದು ಆರೋಪಿ ತಿಳಿದಿದ್ದ. ದರೋಡೆ ಮಾಡುವಂತೆ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಐಡಿಯಾ ಕೊಟ್ಟಿದ್ದ. ಶಿವಾಜಿನಗರದಲ್ಲಿ ಶೂಟಿಂಗ್‌ಗೆ ಎಂದು ಹೇಳಿ ಸಬ್ ಇನ್ಸ್‌ಪೆಕ್ಟರ್ ಡ್ರೆಸ್ ಬಾಡಿಗೆಗೆ ತಂದಿದ್ದ ನಾಗೇಂದ್ರ, ಅದೇ ಡ್ರೆಸ್ ಹಾಕಿಕೊಂಡು ಸಹಚರರೊಂದಿಗೆ ಹೊಂಬಾಳೇಗೌಡ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 570 ಗ್ರಾಂ ಚಿನ್ನಾಭರಣ, 14 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.


