Greater Bengaluru News9 : ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಮತ್ತೆ ಸುದ್ದಿಯಲ್ಲಿದೆ. ಜೈಲಿನೊಳಗಿಂದ ಮದ್ಯಪಾನ, ಡ್ಯಾನ್ಸ್ ಹಾಗೂ ಐಶಾರಾಮಿ ಜೀವನ ಶೈಲಿಯನ್ನು ತೋರಿಸುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾರಥಾನ್ ರೀತಿಯಲ್ಲಿ ವೈರಲ್ ಆಗುತ್ತಿವೆ.
ನಿನ್ನೆಯಷ್ಟೇ ಅತ್ಯಾಚಾರಿ ಉಮೇಶ್ ರೆಡ್ಡಿ, ತರುಣ್ ಕೊಂಡೂರು ಮತ್ತು ಶಂಕಿತ ಉಗ್ರ ಶಕೀಲ್ ಸೇರಿದಂತೆ ಹಲವಾರು ಖೈದಿಗಳ ವಿಡಿಯೋಗಳು ಹರಿದಾಡುತ್ತಿದ್ದರೆ, ಇದೀಗ ಮತ್ತಷ್ಟು ವಿಡಿಯೋಗಳು ಬೆಳಕಿಗೆ ಬಂದಿವೆ. ಈ ದೃಶ್ಯಗಳಲ್ಲಿ ಖೈದಿಗಳು ಮದ್ಯ ಸೇವನೆ ಮಾಡುತ್ತಾ, ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಆದರೆ ಈ ವೈರಲ್ ವಿಡಿಯೋಗಳು ನಿಜವಾಗಿಯೂ ಪರಪ್ಪನ ಅಗ್ರಹಾರ ಜೈಲಿನದ್ದೇನಾ ಅಥವಾ ಬೇರೆ ಯಾವುದೇ ಕಾರಾಗೃಹದದ್ದಾ ಎಂಬುದರ ಕುರಿತು ಇಲಾಖೆ ತನಿಖೆ ಆರಂಭಿಸಿದೆ. ಪ್ರಾಥಮಿಕವಾಗಿ ಇವು ಎರಡು-ಮೂರು ವರ್ಷಗಳ ಹಿಂದಿನ ವಿಡಿಯೋಗಳಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣವು ಮತ್ತೆ ಜೈಲು ನಿರ್ವಹಣೆಯ ಮೇಲಿನ ನಿರ್ಲಕ್ಷ್ಯವನ್ನು ಬೆಳಕಿಗೆ ತಂದಿದೆ.
ಪರಪ್ಪನ ಅಗ್ರಹಾರದಲ್ಲಿ ‘ಎಣ್ಣೆ ಪಾರ್ಟಿ’;
ಇನ್ನೂ ಕೈದಿಗಳು ಜೈಲಿನೊಳಗೆ ಭರ್ಜರಿ ಪಾರ್ಟಿ ಮಾಡಿ ಟಪಾಂಗುಚ್ಚಿ ಹಾಕಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ಲೇಟ್ ಹಾಗೂ ಡ್ರಮ್ ಬಡಿದು ಭರ್ಜರಿ ಸ್ಟೆಪ್ಸ್ ಹಾಕುತ್ತಿದ್ದ ಕೈದಿಗಳು, ಒಂದೇ ಬ್ಯಾರಕ್ನಲ್ಲಿ ನಾನ್-ವೆಜ್ ಕಬಾಬ್ ತಿಂದುಕೊಂಡು ಡ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ.
ಕೈದಿಗಳು ಡ್ಯಾನ್ಸ್ ಮಾಡಿರುವುದೇ ಸಮಸ್ಯೆ ಅಲ್ಲ, ಆದರೆ ಜೈಲಿನೊಳಗೆ ಮೊಬೈಲ್, ಮದ್ಯ ಮತ್ತು ನಾನ್-ವೆಜ್ ಸಪ್ಲೈ ಆಗಿರುವುದೇ ಗಂಭೀರ ವಿಚಾರವಾಗಿದೆ. ಎಷ್ಟೇ ಬಿಗಿ ಭದ್ರತೆ ಇರಲಿ, ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಬಳಕೆ ನಿಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟಪಡಿಸಿದೆ.
ಈ ‘ರಾಜಾತಿಥ್ಯ’ದ ರುವಾರಿ ಯಾರು ಎಂಬುದರ ಕುರಿತು ಈಗ ಜೈಲು ಇಲಾಖೆಯೇ ಉತ್ತರ ಕೊಡಬೇಕಾಗಿದೆ. ವಿಡಿಯೋ ವೈರಲ್ ಹಿನ್ನೆಲೆ, ಮೇಲ್ದರ್ಜೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಜೈಲಿನ ಒಳಗಿನ ಭ್ರಷ್ಟ ಸಂಪರ್ಕಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.


