BBMP
Loading ...

BESCOM

ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ನಕ್ಷೆ ಮಂಜೂರಾತಿ ಪ್ರಮಾಣ ಪತ್ರ (ಸಿಸಿ) ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ ಇಲ್ಲದೇ ಇರುವ ವಸತಿ ಸೇರಿ ಎಲ್ಲ ರೀತಿಯ ಕಟ್ಟಡಗಳಿಗೆ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕವೇ ಸಿಗುತ್ತಿಲ್ಲ! ಈ ಹೊಸ ನಿಯಮ ಕಟ್ಟಡ ಮಾಲೀಕರಿಗೆ ಮೂಲಸೌಕರ್ಯದ ತೊಂದರೆ ಸೃಷ್ಟಿಸಿದರೆ ಬೆಸ್ಕಾಂ, ಜಲಮಂಡಳಿ ಹಾಗೂ ಇತರ ಇಲಾಖೆಗಳಿಗೆ ಸಾವಿರಾರು ಕೋಟಿ ರೂ. ಆದಾಯ ನಷ್ಟ ಉಂಟು ಮಾಡುವ ಆತಂಕಕ್ಕೂ ಕಾರಣವಾಗಿದೆ.

ಎಲ್ಲೆಲ್ಲಿ ಹೊಸ ನಿಯಮ?: ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದೆ.

ಸುಪ್ರೀಂ ಆದೇಶವೇನು?: ಒಸಿ, ಸಿಸಿ ಹೊಂದಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದಿರು ವಂತೆ ಸುಪ್ರೀಂಕೋರ್ಟ್ 2024ರ ಡಿ.17ರಂದು ಆದೇಶ ನೀಡಿದೆ. ಈ ಆದೇಶದಂತೆ ಕಟ್ಟಡ ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ಥಳ ಪರಿಶೀಲನೆಯ ನಂತರವಷ್ಟೇ ಸ್ವಾಧೀನಾನುಭವ ಪತ್ರ ವಿತರಿಸಬೇಕು. ಕಟ್ಟಡ ನಿಯಮ ಉಲ್ಲಂಘಿಸಿ ನಿರ್ಮಾಣ ಆಗಿದ್ದರೆ ಕ್ರಮ ಕೈಗೊಳ್ಳಬೇಕು. ಅದರಂತೆ ಈಗ ಒಸಿ ವಿತರಣೆ ಬಳಿಕವಷ್ಟೇ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ ನೀಡಲಾಗುತ್ತಿದೆ.

ಸುಪ್ರೀಂ ಆದೇಶದ ಬಳಿಕ ಹೊಸ ನಿಯಮದಂತೆ ನಕ್ಷೆ ಮಂಜೂರಾತಿ ಪಡೆಯದ ನಿರ್ಮಾಣ ಹಂತದ ಕಟ್ಟಡಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವೂ ಸಿಗುತ್ತಿಲ್ಲ. ಇಲಾಖೆಗಳ ವಿಳಂಬ ಧೋರಣೆಯಿಂದಾಗಿ ಕಾಲಮಿತಿಯೊಳಗೆ ಒಸಿ, ಸಿಸಿ ಪಡೆಯಲಾಗುತ್ತಿಲ್ಲ. ಈ ದಾಖಲೆಗಳಿಲ್ಲದೆ ಕಟ್ಟಡ ನಿರ್ವಣಕ್ಕೂ ಕೈ ಹಾಕುವಂತಿಲ್ಲ. ಮೊದಲನೇ ಪುಟದಿಂದ…

ಕಟ್ಟಡ ಮಾಲೀಕರು ಇತ್ತ ಸಿಸಿ ಮತ್ತು ಒಸಿ ದಾಖಲೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ, ಅತ್ತ ಅಗತ್ಯ ಸೌಕರ್ಯವಾದ ವಿದ್ಯುತ್, ನೀರಿನ ಸಂಪರ್ಕವೂ ಸಿಗದೆ ಒದ್ದಾಡುವಂತಹ ಪರಿಸ್ಥಿತಿ ನಿರ್ವಣವಾಗಿದೆ.

ನಿಯಮ ಸಡಿಲಿಕೆಗೆ ಮನವಿ

ಕಠಿಣ ನಿಯಮಗಳನ್ನು ಸಡಿಲಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಕಟ್ಟಡ ಗುತ್ತಿಗೆದಾರರ ಸಂಘ ಈಗಾಗಲೇ ಅರ್ಜಿ ಸಲ್ಲಿಸಿ, ನೋಂದಣಿ ಮಾಡಿದವರಿಗೆ ವಿನಾಯಿತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದೆ. ವಿದ್ಯುತ್ ಗುತ್ತಿಗೆದಾರರ ಸಂಘದಿಂದಲೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲು ಸಿದ್ಧತೆಗಳು ನಡೆಯುತ್ತಿದೆ.

ಇಲಾಖೆಗಳಿಗೆ ಸಂಕಷ್ಟವೇನು?

* ಹೊಸ ಸಂಪರ್ಕ ಶುಲ್ಕದ ರೂಪದಲ್ಲಿ ಸಾವಿರಾರು ಕೋಟಿ ರೂ. ಸಂಗ್ರಹ

* ಬೆಸ್ಕಾಂ, ಜಲಮಂಡಳಿ, ನಗರಾಭಿವೃದ್ಧಿ, ಬಿಬಿಎಂಪಿ, ನಗರಸಭೆಗೆ ಆದಾಯ

* ಹೊಸ ನಿಯಮದಿಂದಾಗಿ ಹೊಸ ಸಂಪರ್ಕ ಕೊಡಲು ಸಾಧ್ಯವೇ ಆಗುತ್ತಿಲ್ಲ

* ಬೆಸ್ಕಾಂನಲ್ಲಿ ಕಳೆದೊಂದು ತಿಂಗಳಿಂದ ಹೊಸ ಸಂಪರ್ಕ ಅರ್ಜಿ ವಿಲೇ ಆಗಿಲ್ಲ

* ಬಿಬಿಎಂಪಿ ವ್ಯಾಪ್ತಿ 80 ಸಾವಿರಕ್ಕೂ ಅಧಿಕ ಕಟ್ಟಡ ವಿದ್ಯುತ್ ಸಂಪರ್ಕ ಬಾಕಿ

ಕಟ್ಟಡ ಮಾಲೀಕರ ಕಷ್ಟಗಳು

* ಕಾಲಮಿತಿಯೊಳಗೆ ಕಟ್ಟಡಗಳಿಗೆ ಒಸಿ, ಸಿಸಿ ದಾಖಲೆ ಪಡೆಯಲಾಗುತ್ತಿಲ್ಲ

* ನಕ್ಷೆ ಮಂಜೂರಾತಿ ಒಂದು ಚೂರು ಉಲ್ಲಂಘಿಸಿದ್ರೂ ಅನುಮತಿ ಇಲ್ಲ

* ಶೇ.70ರಿಂದ 80 ಕಟ್ಟಡಗಳು ನಿಯಮಾನುಸಾರ ನಿರ್ವಣವೇ ಆಗಲ್ಲ

* ವಾಸ್ತು ಸೇರಿ ಬೇರೆಬೇರೆ ಕಾರಣಗಳಿಗೆ ನಿಯಮ ಉಲ್ಲಂಘನೆ ಮಾಮೂಲಿ

* ತಾತ್ಕಾಲಿಕ ನೀರು ಸಂಪರ್ಕ, ಕರೆಂಟ್ ಇಲ್ಲದೆ ಕಟ್ಟಡ ನಿರ್ಮಾಣ ಕೆಲಸ ಸ್ಥಗಿತ

* ಕಟ್ಟಡ ಪೂರ್ಣಗೊಂಡು ಗೃಹಪ್ರವೇಶ ನಿಗದಿಯಾದರೂ ಕರೆಂಟು, ನೀರಿಲ್ಲ

ಹೊಸ ನಿಯಮ ಜಾರಿ ಗೊಳಿಸಿದ ಬೆನ್ನಲ್ಲೇ ಒಸಿ, ಸಿಸಿ ದಾಖಲೆ ಪತ್ರಗಳಿದ್ದರೂ ಅರ್ಜಿ ಸಲ್ಲಿಸಲಾಗದ ಪರಿಸ್ಥತಿ. 2 ತಿಂಗಳು ಸರ್ವರ್ ಸಮಸ್ಯೆಯಿಂದಾಗಿ ಬೆಸ್ಕಾಂಗೆ ನೂತನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ ವಾಗುತ್ತಿರಲಿಲ್ಲ. ಸರ್ವರ್ ಅಪ್​ಗ್ರೇಡ್ ಎಂದು ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿಯೂ ಸಮಸ್ಯೆ ಸೃಷ್ಟಿಯಾಗಿತ್ತು.

ಸಮಸ್ಯೆಗೆ ಪರಿಹಾರವೇನು?

* ಸುಪ್ರೀಂ ಆದೇಶದ ಬಳಿಕ ಗಡುವು ನೀಡಿ ಹೊಸ ನಿಯಮ ಜಾರಿ ತರಬೇಕಿತ್ತು. ಸುಪ್ರೀಂ ಆದೇಶಕ್ಕಿಂತ ಮೊದಲು ನೋಂದಾಯಿಸಿದವರಿಗೆ ವಿನಾಯಿತಿ

* ಹೊಸ ನಿಯಮದ ಅನುಕೂಲ-ಅನನುಕೂಲದ ಬಗ್ಗೆ ಜಾಗೃತಿ ಮೂಡಿಸುವುದು

* ಸಿಸಿ, ಒಸಿ ದಾಖಲೆ ಪಡೆಯಲು ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸುವುದು

* ಕೈಗಾರಿಕಾ ಕಟ್ಟಡ ನಿರ್ವಣಕ್ಕೂ ಹೊಸ ನಿಯಮದಿಂದ ಸಮಸ್ಯೆಗಳು ಹೆಚ್ಚಳ

ಹಳೇ ಅರ್ಜಿಗಳೂ ವಿಲೇ ಆಗ್ತಿಲ್ಲ

ಬೆಸ್ಕಾಂನಲ್ಲಿ ಏ.4ರಿಂದ ಹೊಸ ಸಂಪರ್ಕಕ್ಕೆ ಅರ್ಜಿ ನೋಂದಣಿ ನಡೆಯುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶದ ಬಳಿಕ ಏ.4ರವರೆಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಅರ್ಜಿ ಸಲ್ಲಿಕೆ, ವಿದ್ಯುತ್ ಮಂಜೂರಾತಿ, ಕೆಲಸದ ಆದೇಶ, ಮೀಟರ್ ಆರ್ಡರ್ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಕೆಲವು ಕಡೆ ಆರ್​ಆರ್ ಸಂಖ್ಯೆ ಕೊಡುವುದು ಬಾಕಿ ಉಳಿದಿತ್ತು. ಹೊಸ ನಿಯಮ ಜಾರಿಯಿಂದಾಗಿ ಹಳೇ ಅರ್ಜಿಗಳ ವಿಲೇವಾರಿಯೂ ಆಗುತ್ತಿಲ್ಲ. ನಿಯಮ ಜಾರಿಗೂ ಮುನ್ನ ಅರ್ಜಿ ಸಲ್ಲಿಸಿದವರಿಗೂ ಒಸಿ, ಸಿಸಿ ಇಲ್ಲದೆ ಕರೆಂಟು, ನೀರು ಇಲ್ಲ ಎಂಬಂತಾಗಿದೆ.

ತಮನ್ನಾನು ಬೇಡ, ಸುಮನ್ನಾನು ಬೇಡ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ರಾಯಭಾರಿ ಆಗ್ತೀನಿ: ವಾಟಾಳ್ ನಾಗರಾಜ್

Leave a Reply

Your email address will not be published. Required fields are marked *