ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.
ಮಳೆಗಾಲದಲ್ಲಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಾವುಗಳು ಬರುವ ಸಾಧ್ಯತೆ ಹೆಚ್ಚು. ಹಾವು ಕಚ್ಚಿದ ಸಂದರ್ಭಗಳಲ್ಲಿ ಅನೇಕ ಜನರು ಮೊದಲು ಐಸ್ ಹಚ್ಚಿ ವಿಷವನ್ನು ಹೀರಲು ಪ್ರಯತ್ನಿಸುತ್ತಾರೆ. ಆದರೆ, ಇದು ತಪ್ಪು ಮತ್ತು ಅಂತಹ ಕೆಲಸಗಳನ್ನು ಎಂದಿಗೂ ಮಾಡಬಾರದು ಎಂದು ಮುಂಬೈನ ನಾರಾಯಣ್ ಹೆಲ್ತ್ SRCC ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯಕೀಯ ಸಲಹೆಗಾರ ಡಾ. ಅಮಿಂಕಬಾ ಹೇಳುತ್ತಾರೆ.
ಹಾವು ಕಚ್ಚಿದರೆ, ವಿಷವನ್ನು ಹೀರಲು ಪ್ರಯತ್ನಿಸುವುದು ಅಥವಾ ನೇರವಾಗಿ ಐಸ್ ಹಚ್ಚುವುದು ಮುಂತಾದ ತಪ್ಪುಗಳನ್ನು ತಪ್ಪಿಸಿ. ಮೊದಲನೆಯದಾಗಿ ಭಯಪಡಬೇಡಿ. ನೀವು ಭಯಭೀತರಾದರೆ, ವಿಷವು ದೇಹದಾದ್ಯಂತ ಹರಡಬಹುದು. ವಿಷ ನಿರೋಧಕ ಚಿಕಿತ್ಸೆ ಅಗತ್ಯ. ಸರಿಯಾದ ಆರೈಕೆಯನ್ನು ಖಚಿತಪಡಿಸಿಕೊಳ್ಳಬೇಕು. ಹಾವು ಕಡಿತಕ್ಕೊಳಗಾದ ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿ ಎಂದು ಅಮೀನ್ ಕಾಬಾ ಸ್ಪಷ್ಟಪಡಿಸಿದರು.
ಹಾವು ಕಚ್ಚಿದಾಗ ಏನು ಮಾಡಬೇಕು?
- ಹಾವು ಕಚ್ಚಿದ ಪ್ರದೇಶವನ್ನು ಮೊದಲು ತೊಳೆಯಿರಿ. ಗಾಯವನ್ನು ಉಜ್ಜಬೇಡಿ.
- ಹಾವು ಕಚ್ಚಿದ ಪ್ರದೇಶದ ಮೇಲೆ ಬಟ್ಟೆಯನ್ನು ಕಟ್ಟಬೇಡಿ ಅಥವಾ ಗಾಯದಿಂದ ವಿಷವನ್ನು ಹೀರಲು ಪ್ರಯತ್ನಿಸಬೇಡಿ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
- ಹಾವು ಕಚ್ಚಿದ ಪ್ರದೇಶವನ್ನು ಅಲುಗಾಡಿಸಬೇಡಿ. ತಕ್ಷಣದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಿ.
ಹಾವು ಕಡಿತದ ಲಕ್ಷಣಗಳು
- ಕಚ್ಚಿದ ಸ್ಥಳದಲ್ಲಿ ತೀವ್ರ ನೋವು ಮತ್ತು ಊತ.
- ವಾಕರಿಕೆ, ವಾಂತಿ, ಹೊಟ್ಟೆ ನೋವು
- ಉಸಿರಾಟದ ತೊಂದರೆ, ದೃಷ್ಟಿ ಮಂದವಾಗುವುದು
- ಅತಿಯಾದ ರಕ್ತಸ್ರಾವ
ವಿಷಕಾರಿಯಲ್ಲದ ಹಾವು ಕಚ್ಚಿದರೆ ಏನು ಮಾಡಬೇಕು?
ವಿಷ ಇರುವ ಹಾವುಗಳು ಕಚ್ಚಿದ ತಕ್ಷಣ ಚಿಕಿತ್ಸೆ ಪಡೆಯುವ ಜನರು ವಿಷರಹಿತ ಹಾವು ಕಚ್ಚಿದಾಗ ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಈ ರೀತಿ ಮಾಡುವುದು ತಪ್ಪು. ಏನು ಮಾಡಬೇಕೆಂದು ನಾವೀಗ ತಿಳಿದುಕೊಳ್ಳೋಣ.
ವಿಷಕಾರಿಯಲ್ಲದ ಹಾವು ಕಚ್ಚಿದಾಗ ನಿಮ್ಮ ಮೊದಲ ಗಮನ ಗಾಯದ ಆರೈಕೆ ಮತ್ತು ಸೋಂಕನ್ನು ತಡೆಗಟ್ಟುವುದರ ಮೇಲೆ ಇರಬೇಕು. ವಿಷಕಾರಿ ಹಾವು ಕಡಿತದಷ್ಟು ಗಂಭೀರವಾಗಿಲ್ಲದಿದ್ದರೂ, ಅವುಗಳಿಗೆ ತುಂಬಾ ಗಮನ ನೀಡಬೇಕಿದೆ. ಯಾವುದೇ ಹಾವು ಕಚ್ಚಿದಾಗ ಸಾಧ್ಯವಾದರೆ ಮೊದಲು ಆ ಹಾವನ್ನು ಗುರುತಿಸಿ. ಅದು ವಿಷಕಾರಿಯಲ್ಲ ಎಂದು ತಿಳಿದಾಗ ಮನಸ್ಸಿನ ಶಾಂತಿ ಸಿಗುತ್ತದೆ. ಆದರೆ, ವಿಷಕಾರಿಯಲ್ಲದ ಹಾವುಗಳು ಸಹ ಗಂಭೀರ ಗಾಯವನ್ನು ಉಂಟುಮಾಡಬಹುದು. ಊತವನ್ನು ಹೆಚ್ಚು ಮಾಡುವ ಬಿಗಿಯಾದ ಆಭರಣಗಳು ಅಥವಾ ಬಟ್ಟೆಗಳನ್ನು ತೆಗೆದುಹಾಕಿ. ಹಾವು ಕಚ್ಚಿದ ಪ್ರದೇಶವನ್ನು ಸ್ವಚ್ಛಗೊಳಿಸಲು ಸೋಪ್ ಮತ್ತು ನೀರನ್ನು ಬಳಸಿ. ಬಳಿಕ ಸ್ವಚ್ಛವಾದ, ಒಣ ಬ್ಯಾಂಡೇಜ್ ಅನ್ನು ಗಾಯಕ್ಕೆ ಸುತ್ತಿ.
ವೈದ್ಯಕೀಯ ಚಿಕಿತ್ಸೆ ಪಡೆಯಿರಿ
ವಿಷಕಾರಿಯಲ್ಲದ ಹಾವು ಕಚ್ಚಿದರು ಕೂಡ ಸೋಂಕನ್ನು ತಪ್ಪಿಸಲು ಚಿಕಿತ್ಸೆ ಪಡೆಯುವುದು ಉತ್ತಮ. ಸೋಂಕಿನ ಚಿಹ್ನೆಗಳ ಬಗ್ಗೆ (ಹೆಚ್ಚಿದ ನೋವು, ಊತ, ಕೆಂಪು, ಕೀವು) ಜಾಗರೂಕರಾಗಿರಿ ಮತ್ತು ಅವು ಸಂಭವಿಸಿದಲ್ಲಿ ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಇನ್ನು ಯಾವುದೇ ಕಾರಣಕ್ಕೂ ವಿಷವನ್ನು ಹೀರಲು ಪ್ರಯತ್ನಿಸಬೇಡಿ. ಇದು ಹಳೆಯ ಮತ್ತು ನಿಷ್ಪರಿಣಾಮಕಾರಿ ವಿಧಾನವಾಗಿದೆ.
ಯಾವುದೇ ಗಾಯಗಳಿಗೆ ಐಸ್ ಸಾಮಾನ್ಯ ಪರಿಹಾರವಾಗಿದ್ದರೂ, ಹಾವು ಕಡಿತಕ್ಕೆ ಇದನ್ನು ಶಿಫಾರಸು ಮಾಡುವುದಿಲ್ಲ. ಹೀಗಾಗಿ ಅದನ್ನು ಬಳಸಬೇಡಿ. ಹಾವು ಕಚ್ಚಿದಾಗ ತೀವ್ರ ಭಯ ಉಂಟಾಗುತ್ತದೆ. ಇದು ಸಹಜವೂ ಹೌದು. ಆದರೆ, ಯಾವುದೇ ಕಾರಣಕ್ಕೂ ಭಯಪಡಬೇಡಿ. ಹಾವು ಕಚ್ಚಿದ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಮೇಲಿನ ಹಂತಗಳನ್ನು ಅನುಸರಿಸಿ.
ಈ ಹಂತಗಳನ್ನು ಅನುಸರಿಸುವ ಮೂಲಕ, ನೀವು ವಿಷಕಾರಿಯಲ್ಲದ ಹಾವು ಕಡಿತದಿಂದ ಉಂಟಾಗುವ ತೊಡಕುಗಳ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಸರಿಯಾದ ಗುಣಪಡಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು. ಆದರೆ, ಯಾವುದೇ ಹಾವು ಕಡಿತದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ.


