ಬೆಂಗಳೂರು: ನಗರದ ಹಳದಿ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಆರಂಭಕ್ಕೆ ದಿನಗಣನೆ ಶುರುವಾದಂತಿದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಕಾರ್ಯಗತವಾಗಲಿರುವ ಹಳದಿ ಮಾರ್ಗದಲ್ಲಿ ಜುಲೈ 22 ರಿಂದ 25 ರವರೆಗೆ ಸುರಕ್ಷತಾ ಪರಿಶೀಲನೆ ನಡೆಯಲಿದೆ.
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಹಲವು ಹಂತಗಳಲ್ಲಿ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಿದ್ದು, ಎಲ್ಲವೂ ಸರಿಯಾಗಿದ್ರೆ, ಆ ಬಳಿಕ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಹಳದಿ ಮಾರ್ಗವು 19.15 ಕಿಲೋಮೀಟರ್ ಉದ್ದದಲ್ಲಿದ್ದು, ಇದರಲ್ಲಿ ಮೊದಲ ಟೇಸ್ಟ್ ಪರೀಕ್ಷೆ ಜುಲೈ 22 ಮತ್ತು 24 ರ ನಡುವೆ ನಡೆಯಲಿದೆ. ಇನ್ನು 25 ರಂದು ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಪರಿಶೀಲನೆಯೂ ನಡೆಯಲಿದೆ.
ಈ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭದಿಂದ ನಗರದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 16 ನಿಲ್ದಾಣಗಳನ್ನು ಹೊಂದಿರುವ ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿರುವ ಹಳದಿ ಮಾರ್ಗವನ್ನು ಆರಂಭದಲ್ಲಿ ಡಿಸೆಂಬರ್ 2021 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು, ಆದರೆ ವಿವಿಧ ಕಾರಣಗಳಿಂದಾಗಿ ಯೋಜನೆಯು ಗಮನಾರ್ಹ ವಿಳಂಬವಾಯಿತು.
ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಅದ್ಧೂರಿ ಚಾಲನೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ಹಳದಿ ಮಾರ್ಗದ ಪ್ರಯಾಣ, ನಿಲ್ದಾಣದ ವಿಡಿಯೋಗಳು ಮತ್ತು ಡ್ರೋನ್ ದೃಶ್ಯಗಳನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟನೆ ನಡೆಯುವ ಸಾಧ್ಯತೆಯಿದೆ.
5 ನಗರ ಪಾಲಿಕೆಯಾಗಿ ಬಿಬಿಎಂಪಿ ವಿಂಗಡನೆ: ಯಾವ ಕ್ಷೇತ್ರ ಯಾವ ಪಾಲಿಕೆ ವ್ಯಾಪ್ತಿಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ…


