BBMP
Loading ...

Chicken

Greater Bengaluru News9 : ರಾಮನವಮಿ ಹಿನ್ನೆಲೆ ಮಾರ್ಚ್‌ 27 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಮಹತ್ವದ ಸುತ್ತೋಲೆ ಹೊರಡಿಸಿದೆ.

ಹಿಂದೂಗಳ ಹಬ್ಬ, ಮಹಾತ್ಮರ ಜಯಂತಿಗಳಂದು ಜಿಬಿಎ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಲಾಗುತ್ತದೆ. ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದನ್ನ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತೆಯೇ ರಾಮನವಮಿಗೂ ನಿಷೇಧ ಜಾರಿಗೊಳಿಸಲಾಗಿದೆ.

ಮಾರ್ಚ್‌ ಶುಕ್ರವಾರ “ಶ್ರೀರಾಮನವಮಿ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರದೇಶ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಾಗರಿಕರು ಮತ್ತು ವ್ಯಾಪಾರಿಗಳು ಸಹಕರಿಸಲು ಮತ್ತು ಆದೇಶವನ್ನು ಪಾಲಿಸಲು ವಿನಂತಿಸಲಾಗಿದೆ ಎಂದು ಅಪರ ನಿರ್ದೇಶಕರು (ಪಶುಪಾಲನೆ) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಪ್ರಾಣಿವಧೆ ಮಾಂಸ ಮಾರಾಟ ನಿಷೇಧಕ್ಕೆ ಕಾರಣಗಳೇನು?
ರಾಮನವಮಿ ಅಥವಾ ಇತರ ಪ್ರಮುಖ ಹಿಂದೂ ಹಬ್ಬಗಳ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸುವುದಕ್ಕೆ ಪ್ರಮುಖ ಕಾರಣಗಳಿವೆ. ಇವುಗಳಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಅಂಶಗಳು ಸೇರಿವೆ. ಈ ನಿಷೇಧವು ಎಲ್ಲಾ ರಾಜ್ಯಗಳಲ್ಲಿ ಅಥವಾ ಎಲ್ಲಾ ನಗರಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಆಯಾ ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಆದೇಶಗಳನ್ನು ಹೊರಡಿಸುತ್ತವೆ.


ಧಾರ್ಮಿಕ ಭಾವನೆಗಳಿಗೆ ಗೌರವ: ರಾಮನವಮಿಯು ಶ್ರೀರಾಮನ ಜನ್ಮದಿನವಾಗಿದ್ದು, ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದಿನವಾಗಿದೆ. ಈ ದಿನದಂದು ಅನೇಕ ಜನರು ಉಪವಾಸ ಮಾಡುತ್ತಾರೆ ಮತ್ತು ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ತಡೆಯಲು ಮತ್ತು ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗುತ್ತದೆ.


ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ: ರಾಮನವಮಿಯಂದು ಮಧ್ಯಾಹ್ನ ಮೆರವಣಿಗೆಗಳು ಮತ್ತು ಪೂಜಾ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆಗಿಳಿಯುವುದರಿಂದ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಆಯಕಟ್ಟಿನ ಸ್ಥಳಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗುತ್ತದೆ.


ನಗರ ಪಾಲಿಕೆಗಳ ನಿಯಮಗಳು: ಸ್ಥಳೀಯ ನಗರ ಪಾಲಿಕೆಗಳು ವರ್ಷದ ಕೆಲವು ನಿರ್ದಿಷ್ಟ ಹಬ್ಬಗಳ ದಿನಗಳಂದು ವಧಾಶಾಲೆ ಮತ್ತು ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚಲು ಮೊದಲೇ ನಿಯಮಗಳನ್ನು ರೂಪಿಸಿರುತ್ತವೆ. ಗಾಂಧಿ ಜಯಂತಿ, ಮಹಾಶಿವರಾತ್ರಿ, ರಾಮನವಮಿಯಂತಹ ದಿನಗಳು ಸಾಮಾನ್ಯವಾಗಿ ಈ ಪಟ್ಟಿಯಲ್ಲಿರುತ್ತವೆ.


ಸಂಪ್ರದಾಯ: ದಶಕಗಳಿಂದಲೂ ಅನೇಕ ನಗರಗಳಲ್ಲಿ ಹಬ್ಬದ ದಿನಗಳಲ್ಲಿ ಮಾಂಸ ಮಾರಾಟ ಮಾಡದಿರುವುದು ಒಂದು ರೂಢಿಯಾಗಿ ಅಥವಾ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.

ರಾಮನವಮಿಯಂದು ಬೆಂಗಳೂರಿನ ಹಲವೆಡೆ ವಿಶೇಷ ಕಾರ್ಯಕ್ರಮ
ರಾಮನವಮಿಯಂದು ಬೆಂಗಳೂರು ನಗರದ ಶ್ರೀರಾಮ ಮಂದಿಗಳು, ಆಂಜನೇಯ ದೇವಸ್ಥಾನಗಳು, ಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಇರುತ್ತದೆ. ಜತೆಗೆ ನೂರಾರು ಬಡಾವಣೆಗಳಲ್ಲಿ ಸ್ಥಳೀಯ ಸಂಘಗಳು, ಯುವಕರ ಗುಂಪುಗಳು ಕೋಸಂಬರಿ, ಮಜ್ಜಿಗೆ, ಪಾನಕ ಹಂಚುತ್ತವೆ.

Leave a Reply

Your email address will not be published. Required fields are marked *